ಬಾಗಲಕೋಟೆ: ನಗರದ ಹೆಸ್ಕಾಂ ವೃತ್ತದ ಉಗ್ರಾಣ ಕಚೇರಿಗೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ರವಿವಾರ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಬೇಕಾಗುವ ಸಾಮಗ್ರಿಗಳನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಹೆಸ್ಕಾಂ ಕಚೇರಿಯ ಅಧೀಕ್ಷಕ ಅಭಿಯಂತರ ಕಾಶಿನಾಥ ಹಿರೇಮಠ ಅವರು ಉಗ್ರಾಣದಲ್ಲಿ ಲಭ್ಯವಿರುವ ಸಾಮಗ್ರಿಗಳ ವಿವರಣೆ ನೀಡಿದರು. ಉಗ್ರಾಣದಲ್ಲಿ ಒಟ್ಟು 4090 ಕಂಬಗಳು ಲಭ್ಯವಿದ್ದು, ಎಲ್ಲಾ ಕಂಬಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾಗಿಸಲಾಗಿದೆ. 343 ಹೊಸ ಹಾಗೂ 170 ರಿಪೇರಿಗೊಳಿಸಿದ ಪರಿವರ್ತಕಗಳು ಹಾಗೂ 202 ಕಿ.ಮೀ ವಿದ್ಯುತ್ ವಾಹಕವಿದೆ. ಈಗಾಗಲೇ 2,995 ಕಂಬಗಳನ್ನು ಬದಲಾಯಿಸಲಾಗಿದೆ. ಅಲ್ಲದೇ 874 ಪರಿವರ್ತಕಗಳನ್ನು, 155 ಕಿ.ಮೀ ವಾಹಕವನ್ನು ಬದಲಾಯಿಸಿದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಹೆಸ್ಕಾಂ ಉಗ್ರಾಣ ಕಚೇರಿಗೆ ಡಿಸಿ ರಾಮಚಂದ್ರನ್ ಭೇಟಿ, ಪರಿಶೀಲನೆ ಅಲ್ಲದೇ , ಹೆಸ್ಕಾಂ ವಿಜಯಪುರ ಜಿಲ್ಲೆ ವೃತ್ತದಿಂದ 60 ಜನ ಸಿಬ್ಬಂದಿಯು ಮುಧೋಳ, ಬಾಗಲಕೋಟೆ ಹಾಗೂ ಮಹಾಲಿಂಗಪುರ ನೆರೆ ಬಾಧಿತ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಸ್ಕಾಂನ ಎಲ್ಲಾ ಸಿಬ್ಬಂದಿ ಸಾರ್ವತ್ರಿಕ ರಜೆಗಳಾದ ರವಿವಾರ ಹಾಗೂ ಸೋಮವಾರವೂ ಸಹ ಕೆಲಸ ನಿರ್ವಹಿಸಲಿದ್ದಾರೆ. ಒಟ್ಟು 605 ಕಂಪನಿ ಸಿಬ್ಬಂದಿ ಹಾಗೂ 50 ಜನ ಬೆಸ್ಕಾಂ ಕಂಪನಿಯ ಸಿಬ್ಬಂದಿ ಹಾಗೂ ವಿಜಯಪುರದಿಂದ 60 ಜನ ವಿದ್ಯುತ್ ದುರಸ್ಥಿ ಕಾರ್ಯ ಮಾಡುತ್ತಿದ್ದಾರೆ.
ಈಗಾಗಲೇ ಎಲ್ಲಾ ಗ್ರಾಮಗಳಿಗೆ ಹಾಗೂ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ. ಇನ್ನುಳಿದ 8 ಗ್ರಾಮಗಳಲ್ಲಿ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮೂಲ ಸೌಕರ್ಯವನ್ನು ಸರಿಪಡಿಸಲಾಗುವುದು ಎಂದರು.