ಬಾಗಲಕೋಟೆ:ಕೊರೊನಾ ಹಿನ್ನೆಲೆ, ಕಳೆದ ಹಲವು ತಿಂಗಳನಿಂದ ಬಸ್ ಸಂಚಾರ ಬಂದ್ ಆಗಿರುವ ಹಿನ್ನೆಲೆ ಜಿಲ್ಲೆಯ ಸಾರಿಗೆ ಸಂಸ್ಥೆಯ ಇಲಾಖೆಗೆ ಸುಮಾರು 16 ಕೋಟಿ ರೂ. ನಷ್ಟವಾಗಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ಅಧಿಕಾರಿ ಬಸವರಾಜ ಅಮ್ಮಣ್ಣನವರ ತಿಳಿಸಿದ್ದಾರೆ.
ಲಾಕ್ ಡೌನ್ ತೆರವಾದ ಬಳಿಕ ಮತ್ತೆ ನಿಧಾನವಾಗಿ ಬಸ್ ಸಂಚಾರ ಪ್ರಾರಂಭವಾಗಿದೆ. ಮೊದಲನೆಯ ದಿನ ಕೇವಲ 114 ಬಸ್ಗಳು ಸಂಚಾರ ಪ್ರಾರಂಭಿಸಲಾಗಿತ್ತು. ಈಗ 240 ಬಸ್ಗಳ ಸಂಚಾರ ಪ್ರಾರಂಭಿಸಲಾಗಿದೆ. ಇನ್ನೂ ಸಾಕಷ್ಟು ಪ್ರಯಾಣಕರು ಬರದ ಹಿನ್ನೆಲೆ ಹಂತ ಹಂತವಾಗಿ ಬಸ್ಗಳನ್ನು ಬಿಡಲು ಸಂಸ್ಥೆ ನಿರ್ಧಾರ ಮಾಡಿದೆ ಎಂದು ಮಾಹಿತಿ ನೀಡಿದರು.
ಬಾಗಲಕೋಟೆ ಸಾರಿಗೆ ಇಲಾಖೆಗೆ 16 ಕೋಟಿ ನಷ್ಟ ಮೊದಲ ದಿನ 7 ಲಕ್ಷ ರೂ. ಆದಾಯ ಬಂದರೆ, ಕಳೆದ ದಿನ 20 ಲಕ್ಷ ರೂಪಾಯಿ ಆದಾಯ ಬಂದಿದೆ. ಒಟ್ಟು 640 ಸಾರಿಗೆ ಸಂಸ್ಥೆಯ ವಾಹನಗಳಿದ್ದು, ಅದರಲ್ಲಿ ಈಗ ಕೇವಲ 240 ಬಸ್ಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಕಳೆದ ವರ್ಷ ಕೊರೊನಾ ನಂತರ ಸಾರಿಗೆ ಸಂಸ್ಥೆಗೆ 20 ಲಕ್ಷ ರೂ. ಆದಾಯ ಬರಬೇಕಾದರೆ 15 ದಿನ ಕಳೆಯಿತು. ಈ ಬಾರಿ ಮೂರು ದಿನದಲ್ಲಿ 20 ಲಕ್ಷ ರೂ. ಆದಾಯ ಬಂದಿದೆ. ಸಂಸ್ಥೆಯಲ್ಲಿ 2 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದು, 98% ರಷ್ಟು ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಚಾಲಕ, ನಿರ್ವಾಹಕ ಲಸಿಕೆ ಹಾಕಿಸಿಕೊಂಡವರು ಈಗ ಕೆಲಸಕ್ಕೆ ಹಾಜರಾಗಿದ್ದಾರೆ ಎಂದರು.
ಸರ್ಕಾರದ ನಿಯಮದಂತೆ ಸಾರಿಗೆ ಪ್ರಾರಂಭಿಸಲಾಗಿದ್ದು, ಪ್ರಯಾಣಿಕರಿಗೆ ಸೇವೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಕೊರೊನಾದಿಂದ ಸುಮಾರು 20 ಕೋಟಿ ರೂಪಾಯಿ ನಷ್ಟವಾಗಿತ್ತು ಎಂದು ಬಸವರಾಜ ಅಮ್ಮಣ್ಣನವರ ತಿಳಿಸಿದ್ದಾರೆ.