ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಕಡಿಮೆ ಆಗಿದ್ದರೂ ಸಂತ್ರಸ್ತರು ಈಗಲೇ ಮನೆಗೆ ಹೋಗಲು ಸಾಧ್ಯವಿಲ್ಲ. ಇಂತಹ ಸಂತ್ರಸ್ತರಿಗೆ ಮೊದಲು ಶೆಡ್ ನಿರ್ಮಾಣ, ನಂತರ ಶಾಶ್ವತ ಪರಿಹಾರ ಸರ್ಕಾರ ಕಲ್ಪಿಸಿಕೊಡಬೇಕು ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಒತ್ತಾಯಿಸಿದರು.
ಸಂತ್ರಸ್ತರಿಗೆ ಮೊದಲು ಶೆಡ್ ನಿರ್ಮಿಸಿ, ಆಮೇಲೆ ಮನೆ ನೀಡಿ: ಎಸ್.ಆರ್.ಪಾಟೀಲ್
ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಮಾಜಿ ಸಚಿವ ಎಸ್.ಆರ್.ಪಾಟೀಲ್, ಸಂತ್ರಸ್ತರಿಗೆ ಮೊದಲು ಶೆಡ್ ನಿರ್ಮಾಣ ಮಾಡಿಕೊಡಬೇಕು. ನಂತರ ಶಾಶ್ವತ ಪರಿಹಾರ ಸರ್ಕಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್.ಆರ್.ಪಾಟೀಲ್, ಜಿಲ್ಲಾಡಳಿತ, ಸರ್ಕಾರ ನೇರೆ ಸಂತ್ರಸ್ತರಿಗೆ ಈಗಾಗಲೇ ಎಲ್ಲ ಸೌಲಭ್ಯ ನೀಡಿದ್ದು, ಜಿಲ್ಲಾಡಳಿತ ಪ್ರವಾಹದ ಸಂದರ್ಭದಲ್ಲಿ ಚೆನ್ನಾಗಿ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕೇಂದ್ರದಿಂದ ಅನುದಾನ ಬರುವ ಬಗ್ಗೆ ರಾಜಕೀಯ ಮಾಡಲ್ಲ. ಏಕೆಂದರೆ ಪ್ರವಾಹ ಸಂದರ್ಭದಲ್ಲಿ ರಾಜಕೀಯ ಮಾಡಿದರೆ ಸಂತ್ರಸ್ತರ ಬಾಳು ಹಾಳಾಗುತ್ತದೆ.
ಈ ಹಿನ್ನೆಲೆ ನೀರು ಕಡಿಮೆ ಆದ ಬಳಿಕ ಒಂದು ವಾರದೊಳಗೆ ಸಂತ್ರಸ್ತರಿಗೆ ಶೆಡ್ ನಿರ್ಮಾಣ ಸೇರಿದಂತೆ ಇತರ ಸೌಲಭ್ಯ ಒದಗಿಸಬೇಕು ಎಂದ ಅವರು, ಈ ಹಿಂದೆ 2009ರಲ್ಲಿ ನಿರ್ಮಾಣ ಆಗಿರುವ ಆಸರೆ ಮನೆಗಳು ವಾಸ ಮಾಡಲಿಕ್ಕೆ ಯೋಗ್ಯ ಇಲ್ಲ. ಬಾದಾಮಿ ತಾಲೂಕಿನ ಕೆಲ ಪ್ರದೇಶಗಳಲ್ಲಿ ನಿರ್ಮಾಣ ಮಾಡಿದ್ದ ಮನೆಗಳು ಹಾಳಾಗಿವೆ. ಆದ್ದರಿಂದ ಸರ್ಕಾರ ಗುಣಮಟ್ಟದ ಮನೆಗಳು ಸೇರಿದಂತೆ ಶಾಶ್ವತ ಪರಿಹಾರ ನೀಡುವುದು ಅಗತ್ಯವಿದೆ ಎಂದರು.