ಬಾಗಲಕೋಟೆ: ಸಾರಿಗೆ ಸಂಸ್ಥೆಯ ಸಂಚಾರ ಹಾಗೂ ಪ್ರವಾಸಿ ತಾಣಗಳಿಗೆ ಹೋಗುವ ಜನರ ಸಂಖ್ಯೆ ಕಡಿಮೆ ಆದ ಹಿನ್ನೆಲೆ, ಸಾರಿಗೆ ಸಂಸ್ಥೆ ವತಿಯಿಂದ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಸಂಚಾರಕ್ಕೆ ಒನ್ ಡೇ ವಿಶೇಷ ಬಸ್ ಸಂಚಾರ ಆರಂಭಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯುವ ಯತ್ನ ನಡೆದಿದೆ.
ಚಾಲುಕ್ಯ ದರ್ಶನ ಬಸ್ಗೆ ಪೂಜೆ, ಚಾಲನೆ ಚಾಲುಕ್ಯ ದರ್ಶನ:
ಜಿಲ್ಲೆಯಲ್ಲಿ ಚಾಲುಕ್ಯ ದರ್ಶನ ಹೆಸರಿನಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭದ ಹಿನ್ನೆಲೆ ನವನಗರದ ಬಸ್ ನಿಲ್ದಾಣದಲ್ಲಿ ಬಸ್ಗೆ ಪೂಜೆ ಸಲ್ಲಿಸಲಾಯಿತು. ಸಾರಿಗೆ ಸಂಸ್ಥೆಯ ಡಿಸಿ ಬಸವರಾಜ್ ಅಮ್ಮಣ್ಣವರ ನೇತೃತ್ವದಲ್ಲಿ ಬಸ್ಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು.
240 ರೂ. ದರ ನಿಗದಿ:
ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶಿವಯೋಗಿ ಮಂದಿರ, ಕೂಡಲಸಂಗಮ, ಆಲಮಟ್ಟಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಈ ಬಸ್ ಸಂಚರಿಸಲಿದೆ. ಒಂದೇ ದಿನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳಲು 240 ರೂ. ದರ ನಿಗದಿ ಮಾಡಿದ್ದು, ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಜಿಲ್ಲಾಮಟ್ಟದ ಅಧಿಕಾರಿ ಬಸವರಾಜ್ ಅಮ್ಮಣ್ಣವರ ತಿಳಿಸಿದ್ದಾರೆ.
ಒಂದೇ ದಿನದಲ್ಲಿ ಎಲ್ಲ ಪ್ರವಾಸಿ ತಾಣಗಳ ಭೇಟಿ:
ಪ್ರತಿ ದಿನ ನವನಗರದ ಬಸ್ ನಿಲ್ದಾಣದಿಂದ ಬೆಳಗ್ಗೆ 8:30ರಿಂದ ರಾತ್ರಿ 8:30ರವರೆಗೆ ಸಂಚರಿಸುವ ಈ ಬಸ್ಗೆ ಚಾಲುಕ್ಯ ದರ್ಶನ ಎಂಬ ಹೆಸರು ನಾಮಕರಣ ಮಾಡಲಾಗಿದೆ. ಒಂದೇ ಬಸ್ ಮೂಲಕ ಒಂದೇ ದಿನದಲ್ಲಿ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ದಶ೯ನಕ್ಕೆ ಅವಕಾಶ ನೀಡಲಾಗಿದೆ. ವಿಶೇಷ ಅಲಂಕಾರ ಸಹಿತ ಪೂಜೆ ನೆರವೇರಿಸಿ, ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಇದನ್ನೂ ಓದಿ:ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಚರ್ಚೆ ಅಪ್ರಸ್ತುತ : ಸಿದ್ದರಾಮಯ್ಯ
ಪ್ರಯಾಣಿಕರಿಗೆ ಒಂದೇ ದಿನದಲ್ಲಿ ಜಿಲ್ಲೆಯ ಪ್ರವಾಸಿ ತಾಣ ನೋಡಲು ಸಾಧ್ಯವಾಗುತ್ತಿರಲಿಲ್ಲ. ಚಾಲುಕ್ಯ ದರ್ಶನ ಸಂಚಾರದಿಂದ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಮಾಡಿಕೂಡಲಾಗಿದೆ. ಈ ಮೂಲಕ ಜಿಲ್ಲೆಯ ಐತಿಹಾಸಿಕ ಸ್ಥಳ ವೀಕ್ಷಣೆ ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಸಾರಿಗೆ ಸಂಸ್ಥೆಗೂ ಲಾಭ ಆಗುವ ದೃಷ್ಟಿಯಿಂದ ಇಂತಹ ನೂತನ ಯೋಜನೆ ಮಾಡಿರುವುದು ಗಮನ ಸೆಳೆಯುವಂತಿದೆ.