ಕರ್ನಾಟಕ

karnataka

ETV Bharat / state

ಆಡಳಿತ, ಪ್ರತಿಪಕ್ಷದಿಂದಲೂ ಜಿಲ್ಲೆಯ ನಾಯಕರಿಗೆ ಉನ್ನತ ಸ್ಥಾನ: ರಾಜ್ಯ ರಾಜಕೀಯದಲ್ಲಿ ಗಮನ ಸೆಳೆಯುತ್ತಿದೆ ಬಾಗಲಕೋಟೆ ಜಿಲ್ಲೆ

ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ, ಯಾವುದೇ ವಿರೋಧ ಪಕ್ಷವಿರಲಿ ಬಾಗಲಕೋಟೆ ಜಿಲ್ಲೆಯ ನಾಯಕರಿಗೆ ಮಾತ್ರ ದೊಡ್ಡ ದೊಡ್ಡ ಅವಕಾಶಗಳನ್ನು ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಜಿಲ್ಲೆ ಗಮನ ಸೆಳೆಯುತ್ತಿದೆ.

ಆಡಳಿತ, ಪ್ರತಿಪಕ್ಷದಿಂದಲೂ ಜಿಲ್ಲೆಯ ನಾಯಕರಿಗೆ ಉನ್ನತ ಸ್ಥಾನ: ರಾಜ್ಯ ರಾಜಕೀಯದಲ್ಲಿ ಗಮನ ಸೆಳೆಯುತ್ತಿದೆ ಬಾಗಲಕೋಟೆ ಜಿಲ್ಲೆ

By

Published : Oct 11, 2019, 5:16 AM IST

ಬಾಗಲಕೋಟೆ:ಇತ್ತೀಚೆಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆ ಆಗಿ ಮುಧೋಳ ಮೀಸಲು ಮತಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಹುದ್ದೆ ನೀಡಿ, ಬೃಹತ್ ಖಾತೆ ಆಗಿರುವ ಲೋಕೋಪಯೋಗಿ ಇಲಾಖೆ ಖಾತೆ ನೀಡಲಾಗಿದೆ.

ಈ ಮೂಲಕ ಆಡಳಿತ ಸರ್ಕಾರದಿಂದ ಜಿಲ್ಲೆಗೆ ಡಿಸಿಎಂ ಹುದ್ದೆ ಸಿಕ್ಕರೆ, ಇನ್ನೂ ವಿರೋಧ ಪಕ್ಷದ ವತಿಯಿಂದ ಬಾದಾಮಿ ಮತಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯನವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿದೆ. ಇದರ ಜೊತೆಗೆ ವಿಧಾನ ಪರಿಷತ್‌ ಸದಸ್ಯರಾದ ಎಸ್.ಆರ್.ಪಾಟೀಲ್ ಅವರಿಗೆ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿ ಕಾಂಗ್ರೆಸ್ ಪಕ್ಷ ಉನ್ನತ ಸ್ಥಾನಮಾನ ನೀಡಿದೆ. ಇದರಿಂದ ಇಡೀ ಜಿಲ್ಲೆಯೇ ಈಗ ರಾಜ್ಯ ಮಟ್ಟದಲ್ಲಿ ರಾಜಕೀಯವಾಗಿ ಗಮನ ಸೆಳೆಯುವಂತಾಗಿದೆ.

ಬಿಜೆಪಿ ಪಕ್ಷದಲ್ಲಿ ಗೋವಿಂದ ಕಾರಜೋಳ ಅವರನ್ನು ರಾಜಕೀಯ ಮುತ್ಸದ್ಧಿ ಹಾಗೂ ದಲಿತ ನಾಯಕ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆ ನೀಡಲಾಗಿದೆ.

ಬಿಜೆಪಿಯನ್ನು ಎದುರಿಸಲು ಟಗರು ಅಗತ್ಯ ಎಂದು ವಿರೋಧ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರಕ್ಕೆ ಚಾಟಿ ಏಟು ನೀಡುವುದಕ್ಕೆ ಸಿದ್ದರಾಮಯ್ಯ ನೇಮಕ ಅಗತ್ಯವಿತ್ತು. ಆದರೆ ಅವರು ಬಾದಾಮಿ ಶಾಸಕರಾಗಿರುವುದರಿಂದ ಜಿಲ್ಲೆಯ ಶಾಸಕರು ಎಂಬುದು ಗಮನಾರ್ಹ.

ಹಾಗೆಯೇ ಎಸ್ ಆರ್ ಪಾಟೀಲರು ಸಹ ಈ ಹಿಂದೆ ವಿಧಾನ ಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕರಾಗಿ, ಆಡಳಿತ ಪಕ್ಷಕ್ಕೆ ಚಾಟಿ ಬೀಸಿರುವ ಅನುಭವ ಇದೆ. ಈ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ವಿಧಾನ ಪರಿಷತ್​ನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದಲ್ಲಿಯೂ ದೊಡ್ಡ ಸ್ಥಾನ ನಾಯಕರಿಗೆ ದೊರಕಿದೆ.

ಪ್ರಸ್ತುತ ಬಾಗಲಕೋಟೆ ಜಿಲ್ಲೆ ನೆರೆ ಸಮಸ್ಯೆಯಿಂದ ಬಳಲುತ್ತಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಮಾದರಿ ಜಿಲ್ಲೆಯನ್ನಾಗಿ ಮಾಡುವ ಮೂಲಕ ತಮಗೆ ನೀಡಿರುವ ಜವಾಬ್ದಾರಿಯನ್ನು ನಾಯಕರು ಸೂಕ್ತವಾಗಿ ನಿಭಾಯಿಸಿ ಜನರ ಮನ ಗೆಲ್ಲಬೇಕಾಗಿದೆ.

ABOUT THE AUTHOR

...view details