ಬಾಗಲಕೋಟೆ:ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗೂ ಕೊರೊನಾ ತಗುಲಿರುವ ಪರಿಣಾಮ ಇಳಕಲ್ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ. ಆಸ್ಪತ್ರೆಯ ಡಿ ಗ್ರೂಪ್ ನೌಕರ(54)ನಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿಗೆ ಆತಂಕ ಮೂಡಿಸಿದೆ.
ಸೋಂಕಿತ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಸಾರ್ವಜನಿಕ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಆಸ್ಪತ್ರೆಯ 24 ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಸೋಂಕಿತ ವ್ಯಕ್ತಿ ಕಳೆದ ಆರು ತಿಂಗಳಿಂದ ಆಸ್ಪತ್ರೆಯಲ್ಲಿ ಸೇವೆ, ವಾಸ್ತವ್ಯ ಮಾಡಿದ್ದ ಎನ್ನಲಾಗಿದೆ. ಆದರೆ ಆಗಾಗ ಕೆಲಸ ಇದ್ದಾಗ ಬೇರೆ ಕಡೆಗೆ ಹೋಗಿ ಬಂದಿದ್ದರು. ಇತ್ತೀಚೆಗೆ ಮಹಾಲಿಂಗಪುರಕ್ಕೆ ಹೋಗಿ ಬಂದಿದ್ದ ಎಂಬ ಮಾಹಿತಿ ಇದೆ.
ಕಳೆದ ದಿನವಷ್ಟೇ ಇಳಕಲ್ ನಗರದಲ್ಲಿ 12 ಜನರಲ್ಲಿ ಸೋಂಕು ಪತ್ತೆ ಆಗಿತ್ತು. ಇದೀಗ ಅಲ್ಲಿನ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಸಾಮಾನ್ಯ ರೋಗಿಗಳೂ ಚಿಕಿತ್ಸೆ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.