ಮುಂಬೈ: ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಕಳೆದೆರಡು ತಿಂಗಳಿನಿಂದ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಇದರಿಂದ ಭಾರತದ ಆರ್ಥಿಕ ವ್ಯವಸ್ಥೆ ಪಾತಾಳ ಸೇರಿದೆ. ಇಂತಹ ಸಂದರ್ಭದಲ್ಲಿ ದೇಶದ ಆರ್ಥಿಕತೆ ಸುಧಾರಿಸಲು ಸ್ಥಳೀಯ ಬ್ರಾಂಡ್ಗಳಿಗೆ ಉತ್ತೇಜನ ನೀಡಿ ಎಂದು ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾ ಹೇಳಿದ್ದಾರೆ.
ಭಾರತದಲ್ಲಿ ತಯಾರಾಗುವ ವಸ್ತುಗಳಿಗೆ ಪ್ರಾಧಾನ್ಯತೆ ನೀಡಿ ಎಂದು ಸಾನಿಯಾ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ #SupportSmallBySania ಎಂಬ ಹ್ಯಾಶ್ ಟ್ಯಾಗ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದೇಶವೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಾನು ಸಮಾಜಕ್ಕೆ ಏನಾದರೂ ಹಿಂತಿರುಗಿಸಲು ಬಯಸಿದ್ದೇನೆ. ಹೀಗಾಗಿ ಬ್ರಾಂಡ್ಸ್, ಡಿಸೈನರ್ಸ್, ಕ್ರಾಫ್ಟ್ಮನ್, ಪ್ರಾಪರ್ಟಿ, ರೆಸ್ಟೋರೆಂಟ್ಸ್, ಮೊದಲಾಗಿ ಭಾರತದಲ್ಲಿ ತಯಾರಾಗುವ ಯಾವುದಾರೂ ಸರಿ. ನನಗೆ ನಿಮ್ಮ ಸಂಪೂರ್ಣ ಮಾಹಿತಿಯನ್ನು ಇಮೇಲ್ ಮಾಡಿ, ಇದರಲ್ಲಿ ನನಗಿಷ್ಟವಾದ 20 ಬ್ಯಾಂಡ್ಗಳ ಬಗ್ಗೆ ನನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಜೀವನ ಶಾಶ್ವತವಾಗಿ ಬದಲಾಗಿದೆ ಎಂದು ನಮಗೆ ತಿಳಿದಿದೆ. ಇದನ್ನು ನಿವಾರಿಸಲು ನಮ್ಮ ಜನರು ಮತ್ತು ನಮ್ಮ ದೇಶವನ್ನು ವೈರಸ್ನ ನಂತರ ದಿನದಲ್ಲಿ ಪುನರುಜ್ಜೀವನಗೊಳಿಸಲು ಸಹಾಯ ಮಾಡುವ ಏಕೈಕ ಮಾರ್ಗ ಎಂದರೆ ನಮ್ಮ ಸ್ಥಳೀಯ ಬ್ರಾಂಡ್ಗಳನ್ನು ಬೆಂಬಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕೂಡ ದೇಶದ ಜನತೆ ಸ್ವಾವಲಂಬಿಗಳಾಗಬೇಕು. ವಿದೇಶಿ ಬಂಡವಾಳವನ್ನು ಸ್ವಾಗತಿಸಬೇಕು ಹಾಗೂ ಪೂರೈಕೆ ಸರಪಳಿಯನ್ನು ಬಲಪಡಿಸಬೇಕು. ಪ್ರತಿಯೊಬ್ಬ ಭಾರತೀಯನು ಸ್ಥಳೀಯ ವಸ್ತುಗಳನ್ನು ಉತ್ತೇಜಿಸಬೇಕು ಎಂದು ಕೇಳಿಕೊಂಡಿದ್ದಾರೆ.