ಪ್ಯಾರಿಸ್:ವಿಶ್ವ ನಂ. 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಈ ಮೂಲಕ ಅವರು ತಮ್ಮ ವೃತ್ತಿಜೀವನದ 19ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 22 ವರ್ಷದ ಸ್ಟೆಫಾನೋಸ್ ಸಿಸಿಪಾಸ್ ವಿರುದ್ಧ ಅಗ್ರ ಶ್ರೇಯಾಂಕಿತ ನೊವಾಕ್ ಜೊಕೊವಿಕ್ 6-7 (6-8), 2-6, 6-3, 6-2, 6-4 ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಗ್ರ್ಯಾಂಡ್ ಸ್ಲಾಂ ಗೆದ್ದ ಮೊದಲ ಗ್ರೀಕ್ ಆಟಗಾರ ಎನ್ನುವ ಹಂಬಲದಲ್ಲಿದ್ದ 5ನೇ ಶ್ರೇಯಾಂಕಿತ ಸಿಸಿಪಾಸ್ ಮೊದಲೆರಡು ಸೆಟ್ ಗೆದ್ದು ಜೊಕೊವಿಕ್‌ಗೆ ಪ್ರಬಲ ಪೈಪೋಟಿ ನೀಡಿದರು. ಆದರೆ ಮುಂದಿನ 3 ಸೆಟ್‌ಗಳಲ್ಲಿ ಸಿಡಿದೆದ್ದ 34 ವರ್ಷದ ಅನುಭವಿ ಆಟಗಾರ ಜೊಕೊವಿಕ್ ದಿಟ್ಟ ತಿರುಗೇಟು ನೀಡಿದರು.
ನಾಲ್ಕು ಗಂಟೆ 11 ನಿಮಿಷಗಳ ಕಾಲ ನಡೆದ ಸುದೀರ್ಘ ಪ್ರಶಸ್ತಿ ಹೋರಾಟದಲ್ಲಿ ಜೊಕೊವಿಕ್, 5 ವರ್ಷದ ಬಳಿಕ (2016) 2ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದರು. 13 ಬಾರಿಯ ಚಾಂಪಿಯನ್ ರಾಫೆಲ್ ನಡಾಲ್‌ಗೆ ಉಪಾಂತ್ಯದಲ್ಲಿ ಸೋಲುಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದ ಜೊಕೋ, ಕೊನೆಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮುನ್ನ 2012, 2014, 2015, 2020ರ ಫೈನಲ್‌ಗಳಲ್ಲಿ ನಿರಾಸೆ ಇವರು ಅನುಭವಿಸಿದ್ದರು. ಈ ಪೈಕಿ ಮೂರು ಬಾರಿ ನಡಾಲ್ ವಿರುದ್ಧವೇ ಸೋಲು ಕಂಡಿದ್ದರು.
ಈ ಗ್ರ್ಯಾಂಡ್ ಸ್ಲ್ಯಾಂ ಗೆಲ್ಲುವ ಮೂಲಕ ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ 4 ಗ್ರಾಂಡ್ ಸ್ಲಾಂಗಳಲ್ಲಿ ಕನಿಷ್ಠ ತಲಾ 2 ಬಾರಿ ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎಂಬ ಪಟ್ಟಕ್ಕೆ ಜೊಕೊ ಪಾತ್ರರಾಗಿದ್ದಾರೆ. ಜೊಕೊವಿಕ್ ವೃತ್ತಿಜೀವನದ 19ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದರೆ, ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ತಲಾ 20 ಗ್ರ್ಯಾಂಡ್ ಸ್ಲಾಂ ಗೆದ್ದಿದ್ದಾರೆ.