ಪ್ಯಾರಿಸ್ :19 ಗ್ರ್ಯಾಂಡ್ಸ್ಲಾಮ್ ವಿಜೇತ ರಾಫೆಲ್ ನಡಾಲ್ ಅಮೆರಿಕಾದ ಸೆಬಾಸ್ಟಿಯನ್ ಕೊರ್ಡಾರನ್ನು ಮಣಿಸಿ ಫ್ರೆಂಚ್ ಓಪನ್ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ನಡಾಲ್ರ ಪಕ್ಕಾ ಅಭಿಮಾನಿಯಾಗಿರುವ ಸೆಬಾಸ್ಟಿಯನ್ ಇಂದು ತನ್ನಿಷ್ಟದ ಲೆಜೆಂಡ್ ವಿರುದ್ಧ ಆಡುವ ಕನಸನ್ನು ನನಸಾಗಿಸಿಕೊಂಡರಾದ್ರೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕೋರ್ಟ್ ಫಿಲಿಪ್ ಚಾಟ್ರಿಯರ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನಡಾಲ್ 20 ವರ್ಷದ ಆಟಗಾರನ ವಿರುದ್ಧ 6-1,6-1,6-2 ರಲ್ಲಿ ಮಣಿಸಿ 14ನೇ ಬಾರಿ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
12 ಪ್ರಶಸ್ತಿ ಜೊತೆಗೆ ಹಾಲಿ ಚಾಂಪಿಯನ್ ಹಾಗಿರುವ ನಡಾಲ್ ಪ್ಯಾರಿಸ್ ಪರಿಸ್ಥಿತಿಗಳಲ್ಲಿ ತಾವು ಎಂದಿಗೂ ನಿರ್ದಯಿಯೆಂಬುದನ್ನು ಸಾಬೀತು ಮಾಡಿದರು. 13ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನಡಾಲ್ ಟೂರ್ನಿಯಲ್ಲಿ ಈವರೆಗೂ ಒಂದೂ ಸೆಟ್ಗಳನ್ನು ಕಳೆದುಕೊಳ್ಳದೆ ಕ್ವಾರ್ಟರ್ ಪ್ರವೇಶಿಸಿದ್ದಾರೆ.
1998ರ ಆಸ್ಟ್ರೇಲಿಯಾದ ಚಾಂಪಿಯನ್ ಪೆಟ್ರ್ ಕೊರ್ಡಾ ಅವರ ಪುತ್ರನಾಗಿರುವ ಸೆಬಾಸ್ಟಿಯನ್ ಕೊರ್ಡಾ, ಕೆಂಪು ಮಣ್ಣಿನ ಅಂಕಣದಲ್ಲಿ ನಡಾಲ್ ಆಟಕ್ಕೆ ಕೊಚ್ಚಿಹೋದರು. ಆದರೆ, ಅವರು 34 ವರ್ಷದ ತಮಗೆ ಸ್ಫೂರ್ತಿಯಾಗಿರುವ ಟೆನಿಸ್ ಆಟಗಾರನಿಂದ ಕೆಲವು ಉತ್ತೇಜಕ ಮಾತುಗಳನ್ನು ಸ್ವೀಕರಿಸಿದರು.