ಮೆಲ್ಬೋರ್ನ್(ಆಸ್ಟ್ರೇಲಿಯಾ):ವಿಶ್ವದಾಖಲೆಯ 21 ನೇ ಗ್ರ್ಯಾಂಡ್ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸ್ಪೇನಿನ ಟೆನ್ನಿಸ್ ತಾರೆ ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ನಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.
ನಡಾಲ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಲಾಸ್ಲೋ ಡೆರೆ ಅವರನ್ನು 6-3,6-4, 6-1ರಲ್ಲಿ ಮಣಿಸಿದರು.
ಈ ಪಂದ್ಯಕ್ಕೂ ಮೊದಲು, ನಡಾಲ್ ಬೆನ್ನು ನೋವಿನಿಂದಾಗಿ ಕೆಲವು ಎಟಿಪಿ ಕಪ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಆದರೆ, ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ನಡಾಲ್ ಎದುರಾಳಿ ವಿರುದ್ಧ ಕರುಣೆ ತೋರದೆ ತಮ್ಮ ತಾಕತ್ತನ್ನು ಪ್ರದರ್ಶಿಸಿ ಮುಂದಿನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ವಿಶ್ವದ 2ನೇ ಶ್ರೇಯಾಂಕದ ಆಟಗಾರ ಗುರುವಾರ ತಮ್ಮ ಎರಡನೇ ಸುತ್ತಿನ ಪಂದ್ಯವನ್ನಾಡಲಿದ್ದಾರೆ. ಅವರು 2020ರ ಆಸ್ಟ್ರೇಲಿಯನ್ ಓಪನ್ನಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರಾದರೂ, ನಂಬರ್ ಒನ್ ಶ್ರೇಯಾಂಕದ ನೊವಾಕ್ ಜೋಕೊವಿಕ್ ವಿರುದ್ದ ಸೋಲು ಕಾಣುವ ಮೂಲಕ ನಿರಾಸೆಯನುಭವಿಸಿದ್ದರು.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೆವ್ ಕೆನಡಾದ ವಾಸೆಕ್ ಪೋಸ್ಪಿಸಿಲ್ ವಿರುದ್ಧ 6-2, 6-2,6-4ರಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು.
ಸೋಮವಾರದ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಜೋಕೊವಿಕ್ ಮತ್ತು 3ನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಕೂಡ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು.
ಇದನ್ನು ಓದಿ: ಆಸ್ಟ್ರೇಲಿಯನ್ ಓಪನ್ 2021: ಮೊದಲ ಸುತ್ತಿನಲ್ಲೇ ಹೊರಬಿದ್ದ ಸುಮಿತ್ ನಗಾಲ್