ದುಬೈ :ಐಸಿಸಿ ಟಿ-20 ವಿಶ್ವಕಪ್(ICC T20 World Cup)ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 5 ವಿಕೆಟ್ಗಳ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಟೂರ್ನಿ ಉದ್ದಕ್ಕೂ ಅಭೂತ ಪೂರ್ವ ಪ್ರದರ್ಶನ ನೀಡಿದ್ದ ಪಾಕ್ನ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್(Mohammad rizwan) ಸೆಮಿಫೈನಲ್ ಪಂದ್ಯಕ್ಕೂ ಮುಂಚಿತವಾಗಿ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದ ವಿಷಯ ಬಹಿರಂಗಗೊಂಡಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ತಂಡದ ವೈದ್ಯ ನಜೀಬ್ ಸೊಮ್ರೂ ಈ ವಿಷಯ ಬಹಿರಂಗಪಡಿಸಿದ್ದಾರೆ.
ಎದೆಯ ಸೋಂಕಿನಿಂದಾಗಿ ತೊಂದರೆಗೊಳಗಾಗಿದ್ದ ಮೊಹಮ್ಮದ್ ರಿಜ್ವಾನ್ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದಿದ್ದಾರೆ. ಜೊತೆಗೆ ಅವರು ಸೆಮಿಫೈನಲ್ನಲ್ಲಿ ಆಡುವ ಇರಾದೆ ವ್ಯಕ್ತಪಡಿಸಿದ್ದರಿಂದ ಅವಕಾಶ ನೀಡಲಾಗಿತ್ತು ಎಂದಿದ್ದಾರೆ.
ಎದೆಯಲ್ಲಿ ಸೋಂಕು ಕಾಣಿಸಿದ್ದರಿಂದ ನವೆಂಬರ್ 9ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಎರಡು ದಿನಗಳ ಕಾಲ ಐಸಿಯು(ICU)ನಲ್ಲಿ ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿದ್ದರು.
ನಿನ್ನೆಯ ಪಂದ್ಯದಲ್ಲಿ ಕ್ಯಾಪ್ಟನ್ ಬಾಬರ್ ಆಜಂ ಜೊತೆ ಕಣಕ್ಕಿಳಿದಿದ್ದ ರಿಜ್ವಾನ್ 52 ಎಸೆತಗಳಲ್ಲಿ 4 ಸಿಕ್ಸರ್ ಮೂರು ಬೌಂಡರಿ ಸೇರಿದಂತೆ 67ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದರು. ಪಾಕಿಸ್ತಾನ ಬೃಹತ್ ರನ್ ಹೊರತಾಗಿ ಕೂಡ ಸೋಲು ಕಂಡಿತು.
ಇದನ್ನೂ ಓದಿರಿ:IND vs NZ: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟ; ಅಜಿಂಕ್ಯ ರಹಾನೆ ನಾಯಕ
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್(Shoaib Akhtar) ಕೂಡ ಟ್ವೀಟ್ ಮಾಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದು, ದೇಶಕ್ಕಾಗಿ ಆಡಿರುವ ಈ ವ್ಯಕ್ತಿಯ ಕೊಡುಗೆ ನೀವು ಊಹಿಸಲು ಸಾಧ್ಯವೇ? ಎಂದು ಬರೆದುಕೊಂಡಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಗೆದ್ದಿರುವ ನ್ಯೂಜಿಲ್ಯಾಂಡ್ ಫೈನಲ್ನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.