ದುಬೈ: ಆಸ್ಟ್ರೇಲಿಯಾದ ಸ್ಟಾರ್ ಓಪನಿಂಗ್ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರು ಫುಟ್ಬಾಲ್ ಸ್ಟಾರ್ ಕ್ರಿಶ್ಚಿಯಾನೋ ರೊನಾಲ್ಡೋ ಅವರನ್ನು 'ಫಾಲೋ' ಮಾಡಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಏಳು ವಿಕೆಟ್ಗಳ ಅಂತರದಿಂದ ಆಸ್ಟ್ರೇಲಿಯಾ ಸೋಲಿಸಿದ ನಂತರ ವಿನೋದದ ಘಟನೆಯೊಂದು ನಡೆದಿದೆ.
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಪಂದ್ಯ ನಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಮೊದಲು ಮೇಜಿನ ಮೇಲಿದ್ದ ಕೋಕ್ ಬಾಟಲಿಗಳನ್ನು ಕೆಳಗೆ ಮುಚ್ಚಿಟ್ಟ ವಾರ್ನರ್, ನೀರಿನ ಬಾಟಲಿಗಳನ್ನು ಮಾತ್ರ ಮೇಜಿನ ಮೇಲೆ ಉಳಿಸಿಕೊಳ್ಳುತ್ತಾರೆ.
ಇದೆ ವೇಳೆ ಪಕ್ಕದಲ್ಲಿದ್ದವರೊಂದಿಗೆ ಮಾತನಾಡಿದ ಅವರು, 'ಇದು ಕ್ರಿಶ್ಚಿಯಾನೋಗೆ ಒಳ್ಳೆಯದು ಅಂತಾದರೆ, ನನಗೂ ಕೂಡಾ ಒಳ್ಳೆಯದೇ' ಎಂದಿದ್ದಾರೆ. ನಂತರ ಅವುಗಳನ್ನು ಮತ್ತೆ ಮೇಜಿನ ಮೇಲಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರು ವಾರ್ನರ್ ಹಾಸ್ಯಪ್ರಜ್ಞೆಗೆ ಫಿದಾ ಆಗಿದ್ದಾರೆ.
ಯುಇಎಫ್ಎ ಯೂರೋ-2020 ಪಂದ್ಯದ ವೇಳೆಯೂ ಕೂಡಾ ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಇದೇ ರೀತಿಯಲ್ಲಿ ಕೋಕ್ ಬಾಟಲಿಗಳನ್ನು ಎತ್ತಿಟ್ಟು 'ನೀರು ಕುಡಿಯಿರಿ ಆರೋಗ್ಯಕ್ಕೆ ಒಳ್ಳೆಯದು' ಎಂಬ ಸಂದೇಶ ನೀಡಿದ್ದರು.
ಇದನ್ನೂ ಓದಿ:ರೊನಾಲ್ಡೊರ ಆ ಒಂದು ನಿರ್ಧಾರದಿಂದ ಕೋಲಾ ಕಂಪನಿಗೆ ಆದ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ?