ನವದೆಹಲಿ: ಬಿಜೆಪಿ ಸಂಸದ ಹಾಗೂ ಕುಸ್ತಿ ಸಂಸ್ಥೆಯ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕಾಗಿ ಹೋರಾಟ ನಡೆಸುತ್ತಿರುವ ಸಾಕ್ಷಿ ಮಲಿಕ್ ಹಾಗು ಇತರೆ ಕುಸ್ತಿಪಟುಗಳು ಚಳವಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಇಂದು ಸುದ್ದಿ ಬಿತ್ತರವಾಗಿತ್ತು. ಇದನ್ನು ತಳ್ಳಿ ಹಾಕಿರುವ ಕುಸ್ತಿಪಟುಗಳು ಈ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ. ಅಲ್ಲದೇ, ನಾವು ಪ್ರತಿಭಟನೆ ವಾಪಸ್ ಪಡೆದಿಲ್ಲ, FIR ಕೂಡಾ ಹಿಂತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದು, ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಕ್ಷಿ ಮಲ್ಲಿಕ್ ಮತ್ತು ಬಜರಂಗ್ ಪೂನಿಯಾ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
ಸಾಕ್ಷಿ ಮಲಿಕ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಮಾಧ್ಯಮವೊಂದು ಪ್ರತಿಭಟನೆಯಿಂದ ಕುಸ್ತಿಪಟುಗಳು ಹಿಂದೆ ಸರಿದಿದ್ದಾರೆ ಎಂಬ ಸುದ್ದಿಯ ಫೋಟೋ ಹಂಚಿಕೊಂಡು, "ಈ ಸುದ್ದಿ ಸಂಪೂರ್ಣ ಸುಳ್ಳು. ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ನಾವು ಹಿಂದೆ ಸರಿದಿಲ್ಲ, ಹಿಂದೆ ಸರಿಯುವುದೂ ಇಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿಗಳನ್ನು ಹಬ್ಬಿಸಬೇಡಿ" ಎಂದು ಮನವಿ ಮಾಡಿದ್ದಾರೆ.
ಬಜರಂಗ್ ಪುನಿಯಾ ಟ್ವೀಟ್ನಲ್ಲಿ, "ಚಳವಳಿ ಹಿಂಪಡೆಯುವ ಸುದ್ದಿ ಕೇವಲ ವದಂತಿ. ನಮಗೆ ಹಾನಿ ಮಾಡಲು ಈ ಸುದ್ದಿ ಹಬ್ಬಿಸಲಾಗುತ್ತಿದೆ. ನಾವು ಹಿಂದೆ ಸರಿದಿಲ್ಲ ಅಥವಾ ಚಳವಳಿಯನ್ನು ಹಿಂತೆಗೆದುಕೊಂಡಿಲ್ಲ. ಮಹಿಳಾ ಕುಸ್ತಿಪಟುಗಳು ಎಫ್‌ಐಆರ್ ವಾಪಸ್ ಪಡೆದಿದ್ದಾರೆ ಎಂಬ ಸುದ್ದಿಯೂ ಸುಳ್ಳು. ನ್ಯಾಯ ಸಿಗುವವರೆಗೂ ಹೋರಾಟ ನಡೆಯುತ್ತದೆ" ಎಂದು ತಿಳಿಸಿದ್ದಾರೆ.