ಕರ್ನಾಟಕ

karnataka

ETV Bharat / sports

World Athletics Championship: 3000 ಮೀಟರ್​ ಓಟದಲ್ಲಿ ದಾಖಲೆ ಬರೆದ ಪಾರುಲ್ ಚೌಧರಿ.. 2024ರ ಪ್ಯಾರಿಸ್​ ಒಲಂಪಿಕ್​ಗೆ ಅರ್ಹತೆ - ETV Bharath Kannada news

World Athletics Championship 2023: 3000 ಮೀಟರ್​ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ 11ನೇ ಸ್ಥಾನ ಪಡೆದು 2024ರ ಪ್ಯಾರಿಸ್​ ಒಲಂಪಿಕ್ಸ್​​ಗೆ ಆಯ್ಕೆ ಆಗಿದ್ದಾರೆ.

Parul Chaudhary
Parul Chaudhary

By ETV Bharat Karnataka Team

Published : Aug 28, 2023, 12:54 PM IST

ಬುಡಾಪೆಸ್ಟ್ (ಹಂಗೇರಿ): ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರ 3000 ಮೀಟರ್​ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ. ಸ್ಪರ್ಧೆಯಲ್ಲಿ 9:15.31 ಸಮಯದಲ್ಲಿ ಓಟ ಪೂರ್ಣಗೊಳಿಸಿದ ಅವರು, 11ನೇ ಸ್ಥಾನ ಪಡೆದರು. ಈ ಮೂಲಕ ಪಾರುಲ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. 3000 ಮೀಟರ್​ ಓಟವನ್ನು 9:15.31 ನಿಮಿಷದಲ್ಲಿ ಪೂರೈಸಿದ್ದು ಭಾರತದ ದಾಖಲೆಯಾಗಿದೆ.

8:54.29 ಸಮಯದಿಂದ ಬ್ರೂನಿ ಅಥ್ಲೀಟ್ ವಿನ್‌ಫ್ರೆಡ್ ಮ್ಯೂಟಿಲ್ ಯವಿ ಚಿನ್ನದ ಪದಕವನ್ನು ಪಡೆದರೆ, ಕೀನ್ಯಾದ ಬೀಟ್ರಿಸ್ ಚೆಪ್‌ಕೋಚ್ 8:58.98ರ ಸಮಯದಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. 9:00.69 ಸಮಯ ತೆಗೆದುಕೊಂಡ ಕೀನ್ಯಾದ ಅಥ್ಲೀಟ್ ಫೇಯ್ತ್ ಚೆರೋಟಿಚ್ ಕಂಚಿಗೆ ಕೊರಳೊಡ್ಡಿದರು.

ಪಾರುಲ್​ ಮೊದಲ 200 ಮೀಟರ್​ನಲ್ಲಿ ಮುನ್ನಡೆ ಸಾಧಿಸಿದ್ದರು. ನಂತರ ವೇಗವನ್ನು ಕಳೆದುಕೊಂಡರು. 2900 ಮೀಟರ್​ ಇದ್ದಾಗ 13ನೇ ಸ್ಥಾನದಲ್ಲಿದ್ದ ಅವರು ವೇಗವನ್ನು ಹೆಚ್ಚಿಸಿ ಇಬ್ಬರು ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿದರು. ಇದರಿಂದ ಅವರು 11ನೇ ಸ್ಥಾನ ಪಡೆದುಕೊಂಡರು.

ರಿಲೇಯಲ್ಲಿ ಐದನೇ ಸ್ಥಾನ:ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಪುರುಷರ 4x400 ಮೀಟರ್​ ರಿಲೇ ಓಟವನ್ನು ಮುಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ಮತ್ತು ರಾಜೇಶ್ ರಮೇಶ್ 2:59.92 ನಿಮಿಷದಲ್ಲಿ ಪೂರ್ಣಗೊಳಿಸಿ ಐದನೇ ಸ್ಥಾನ ಗಳಿಸಿದರು. ಅಮೆರಿಕದ ರಿಲೇ ತಂಡ 2:57.31 ನಿಮಿಷದಲ್ಲಿ 400 ಮೀಟರ್​ ಪೂರ್ಣಗೊಳಿಸಿದ್ದರಿಂದ ಚಿನ್ನದ ಪದಕ ಗೆದ್ದರು. 2:58.45 ನಿಮಿಷದಲ್ಲಿ ಮುಗಿಸಿದ ಫ್ರಾನ್ಸ್ ತಂಡ ಬೆಳ್ಳಿ ಗೆದ್ದರೆ, ಗ್ರೇಟ್ ಬ್ರಿಟನ್ 2:58.71 ನಿಮಿಷದಿಂದ ಕಂಚಿಗೆ ತೃಪ್ತಿ ಪಟ್ಟಿದೆ.

ಗೋಲ್ಡನ್​ ಬಾಯ್​ಗೆ ಚಿನ್ನ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಜಾವೆಲ್​ ಥ್ರೋದಲ್ಲಿ ಪದಕ ಗೆಲ್ಲುವ ನಿರೀಕ್ಷೆ ಭಾರತದ ಕ್ರೀಡಾಸಕ್ತರಲ್ಲಿತ್ತು. ಇದನ್ನು ನೀರಜ್​ ಚೋಪ್ರಾ ಹುಸಿಯಾಗಿಸಲಿಲ್ಲ. ಮೊದಲ ಎಸೆತವನ್ನು ಪೌಲ್​ ಮಾಡಿದ ಅವರು ಎರಡನೇ ಪ್ರಯತ್ನದಲ್ಲಿ 88.17 ಮೀಟರ್​ ದೂರ ಈಟಿ ಎಸೆದು ಚಿನ್ನವನ್ನು ಗೆದ್ದರು. ಭಾರತಕ್ಕೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಮೊದಲ ಚಿನ್ನವನ್ನು ತಂದುಕೊಟ್ಟರು.

ಭಾರತದ ಇನ್ನಿಬ್ಬರು ಆಟಗಾರರಾದ ಕಿಶೋರ್​ ಜೆನಾ ಮತ್ತು ಕರ್ನಾಟಕದ ಡಿ ಪಿ ಮನು ಕೂಡಾ ಚಾವೆಲಿನ್​ ಥ್ರೋದ ಫೈನಲ್​ನಲ್ಲಿ ಭಾಗವಹಿಸಿದ್ದರು. ಈ ಇಬ್ಬರು ಪ್ರಶಸ್ತಿ ಗೆಲ್ಲದಿದ್ದರು ಗಮನಾರ್ಹ ಪ್ರದರ್ಶನ ನೀಡಿದರು. ಕಿಶೋರ್​ ತಮ್ಮ 5ನೇ ಪ್ರಯತ್ನದಲ್ಲಿ 84.77 ಮೀಟರ್​ ಎಸೆದು 5ನೇ ಸ್ಥಾನ ಪಡೆದರೆ, ಮನು 6ನೇ ಪ್ರಯತ್ನದಲ್ಲಿ 84.14 ಮೀಟರ್​ ದೂರ ಎಸೆದು ಆರನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಚೋಪ್ರಾ ಭರ್ಜರಿ ಸಾಧನೆ..

ABOUT THE AUTHOR

...view details