ಕರ್ನಾಟಕ

karnataka

ETV Bharat / sports

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ... ಎರಡು ಪ್ರತ್ಯೇಕ ಎಫ್​ಐಆರ್​ ದಾಖಲು, ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ಕೇಸ್​ - ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ

ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪ ಸಂಬಂಧ ದೆಹಲಿ ಪೊಲೀಸರು ಎರಡು ಪ್ರತ್ಯೇಕ ಎಫ್​ಐಆರ್​ ದಾಖಲಿಸಿದ್ದಾರೆ.

two-fir-against-wfi-chief-brij-brijbhushan-sharan-singh
ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ಕೇಸ್​

By

Published : Apr 28, 2023, 11:35 PM IST

Updated : Apr 29, 2023, 12:01 AM IST

ನವದೆಹಲಿ:ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನ ಮೇಲೆ ಎರಡು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ದೆಹಲಿ ಡಿಸಿಪಿ ಪ್ರಣವ್ ತಾಯಲ್ ತಿಳಿಸಿದ್ದಾರೆ.

ಮೊದಲ ಎಫ್ಐಆರ್ ಅನ್ನು ಬ್ರಿಜ್​ ಭೂಷಣ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ದಾಖಲಾಗಿದ್ದು, ವಯಸ್ಕ ಕ್ರೀಡಾಪಟುಗಳು ನೀಡಿದ ದೂರಿನ ಪ್ರಕಾರ ಸಮಗ್ರ ತನಿಖೆಗಾಗಿ ಎರಡನೇ ಎಫ್ಐಆರ್ ದಾಖಲಿಸಲಾಗಿದೆ. ಒಟ್ಟಾರೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಈ ಎಫ್ಐಆರ್​ಗಳು ದಾಖಲಾಗಿವೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಒತ್ತಾಯಿಸಿ ಖ್ಯಾತ ಕುಸ್ತಿಪಟುಗಳು ದೆಹಲಿಯ ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ, ಈ ಸಂಬಂಧ ಸುಪ್ರೀಂ ಕೋರ್ಟ್‌ಗೂ ಮೊರೆ ಹೋಗಿದ್ದರು. ಇಂದು ವಿಚಾರಣೆ ವೇಳೆ ಏಳು ಮಹಿಳಾ ಕುಸ್ತಿಪಟುಗಳು ನೀಡಿರುವ ಲೈಂಗಿಕ ಕಿರುಕುಳ ಆರೋಪದ ದೂರಿನ ಬಗ್ಗೆ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್​ಗೆ ಪೊಲೀಸರ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದರು.

ಇದೇ ವೇಳೆ ಕುಸ್ತಿಪಟುಗಳಿಗೆ ಬೆದರಿಕೆ ಇರುವ ಬಗ್ಗೆ ಪರಿಶೀಲನೆ ಮಾಡಬೇಕು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರಲ್ಲಿ ಒಬ್ಬರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ನ್ಯಾಯ ಪೀಠವು ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ಈ ಹಿಂದಿನ ವಿಚಾರಣೆಯಲ್ಲಿ ಕುಸ್ತಿಪಟುಗಳು ಮಾಡಿರುವ ಆರೋಪಗಳು 'ಗಂಭೀರ' ಸ್ವರೂಪವಾಗಿವೆ ಎಂದು ಹೇಳಿದ್ದ ನ್ಯಾಯ ಪೀಠವು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ:ಕುಸ್ತಿ ಫೆಡರೇಷನ್ ಮುಖ್ಯಸ್ಥರ ಲೈಂಗಿಕ ಕಿರುಕುಳ ಆರೋಪ: ಇಂದೇ ಎಫ್‌ಐಆರ್ ದಾಖಲು.. ಸುಪ್ರೀಂಗೆ ಪೊಲೀಸರ ಹೇಳಿಕೆ

ಮೂರು ತಿಂಗಳಿಂದ ಹೋರಾಟ: ಡಬ್ಲ್ಯುಎಫ್‌ಐ ಮುಖ್ಯಸ್ಥರಾದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಹಾಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದರು. ಆಗ ಪ್ರತಿಭಟನೆಯನ್ನೂ ಕೈಗೊಂಡಿದ್ದರು.

ಇದರಿಂದ ಎಚ್ಚೆತ್ತಗೊಂಡಿದ್ದ ಕೇಂದ್ರ ಸರ್ಕಾರವು ಡಬ್ಲ್ಯುಎಫ್‌ಐ ಮತ್ತು ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಮೇಲುಸ್ತುವಾರಿ ಸಮತಿಯನ್ನು ರಚಿಸಿತ್ತು. ಇದೇ ವೇಳೆ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪೊಲೀಸರಿಗೆ ದೂರು ಸಹ ನೀಡಿದ್ದರು. ಆದರೆ, ಇದುವರೆಗೂ ಡಬ್ಲ್ಯುಎಫ್‌ಐ ವಿರುದ್ಧ ಆಗಲಿ ಅಥವಾ ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವಾಗಲಿ ಪೊಲೀಸರು ಯಾವುದೇ ಕೇಸ್​ ದಾಖಲಿಸಿಲ್ಲ ಎಂದು ಕುಸ್ತಿಪಟುಗಳು ಆಕ್ರೋಶ ಹೊರ ಹಾಕಿದ್ದರು.

ಈ ನಿಟ್ಟಿನಲ್ಲಿ ಭಾನುವಾರದಿಂದ ಎರಡನೇ ಹಂತದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜೊತೆಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್​ಐಆರ್​ ದಾಖಲಿಸಬೇಕೆಂದು ಪ್ರಧಾನಿ ಮೋದಿ ಅವರಿಗೂ ಮನವಿ ಮಾಡಿದ್ದರು. ಪ್ರಧಾನಿ ಮೋದಿ ಪ್ರತಿಯೊಬ್ಬರ ಮನ್ ಕಿ ಬಾತ್​ ಅನ್ನು ಕೇಳುತ್ತಾರೆ. ನಮ್ಮ ಮನ್ ಕಿ ಬಾತ್ ಕೇಳಲು ಆಗುವುದಿಲ್ಲವೇ ಎಂದೂ ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳು ಪ್ರಶ್ನೆ ಮಾಡಿದ್ದರು. ಕುಸ್ತಿಪಟುಗಳ ಈ ಹೋರಾಟಕ್ಕೆ ಅನೇಕ ರಾಜಕಾರಣಿಗಳು ಮತ್ತು ರೈತ ಸಂಘಟನೆಗಳು ಹಾಗೂ ಇತರ ಕ್ರೀಡಾ ಪಟುಗಳಿಂದ ಬೆಂಬಲ ವ್ಯಕ್ತವಾಗಿತ್ತು.

ಇದನ್ನೂ ಓದಿ:ಪಿಟಿ ಉಷಾ ಅವರೇ ನಮಗೆ ಸ್ಫೂರ್ತಿ.. ಆದರೆ, ಅವರ ಹೇಳಿಕೆ ಸಂವೇದನಾರಹಿತ: ಕುಸ್ತಿಪಟುಗಳ ಅತೃಪ್ತಿ

Last Updated : Apr 29, 2023, 12:01 AM IST

ABOUT THE AUTHOR

...view details