ನವದೆಹಲಿ: ಆಗಸ್ಟ್ 12 ರಂದು ನಡೆಯಲಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸೇರಿದಂತೆ ಮೂರು ಹುದ್ದೆಗಳಿಗೆ ದೆಹಲಿ ರಾಜ್ಯ ಸಂಸ್ಥೆಯ ಮುಖ್ಯಸ್ಥ ಜೈ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮಂಗಳವಾರ ಚುನಾವಣಾಧಿಕಾರಿ ಹೊರಡಿಸಿದ ಅಧಿಕೃತ ಪಟ್ಟಿಯಿಂದ ತಿಳಿದು ಬಂದಿದೆ.
ಪ್ರಕಾಶ್ ಅಲ್ಲದೆ, ಯುಪಿ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷ ಸಂಜಯ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧೀಕ್ಷಕ ದುಶ್ಯಂತ್ ಶರ್ಮಾ ಮತ್ತು 2010 ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆಯೊರಾನ್ ಅವರು ಉನ್ನತ ಹುದ್ದೆಗೆ ಕಣದಲ್ಲಿರುವ ಇತರ ಮೂವರು ಅಭ್ಯರ್ಥಿಗಳು. ನಾಲ್ವರಲ್ಲಿ ಜೈ ಪ್ರಕಾಶ್ ಮತ್ತು ಸಂಜಯ್ ಸಿಂಗ್ ಬ್ರಿಜ್ ಭೂಷಣ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾದ ಅನಿತಾ ಶೆಯೊರಾನ್ ಒಡಿಶಾವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರಕಾಶ್ ಅವರು ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಇತರ ಎರಡು ಹುದ್ದೆಗಳಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವಾದ ಸೋಮವಾರ ಬ್ರಿಜ್ ಭೂಷಣ್ ಬಳಗವು ಪ್ರಕಾಶ್ ಅವರ ಹೆಸರನ್ನು ರಹಸ್ಯವಾಗಿ ಇರಿಸಿತ್ತು. ಡಬ್ಲ್ಯುಎಫ್‌ಐ ಜಂಟಿ ಕಾರ್ಯದರ್ಶಿಯೂ ಆಗಿರುವ ಸಿಂಗ್ ಅವರನ್ನು ಮಾತ್ರ ಉನ್ನತ ಹುದ್ದೆಗೆ ತಮ್ಮ ಏಕೈಕ ಅಭ್ಯರ್ಥಿ ಎಂದು ಬಿಂಬಿಸಿತ್ತು. ನಾಮಪತ್ರ ಹಿಂಪಡೆಯಲು ಆಗಸ್ಟ್ 7 ಕೊನೆಯ ದಿನವಾಗಿದೆ.
ಜುಲೈ 30 ರಂದು ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ಬ್ರಿಜ್ ಭೂಷಣ್ ಆಯೋಜಿಸಿದ್ದ ನಿರ್ಣಾಯಕ ಸಭೆಯಲ್ಲಿ ದುಶ್ಯಂತ್ ಭಾಗವಹಿಸಿದ್ದರು. ಅಲ್ಲಿ ಡಬ್ಲ್ಯುಎಫ್‌ಐ ಚುನಾವಣೆಗೆ 25 ರಾಜ್ಯಗಳಲ್ಲಿ 22 ಸಂಸ್ಥೆಗಳ ಬೆಂಬಲವಿದೆ ಎಂದು ಬಿಜೆಪಿ ನಾಯಕ ಘೋಷಿಸಿದ್ದರು. ದುಷ್ಯಂತ್ ಕೂಡ ಖಜಾಂಚಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದು, ಚಂಡೀಗಢ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಡಬ್ಲ್ಯುಎಫ್‌ಐ ಉಪಾಧ್ಯಕ್ಷ ದರ್ಶನ್ ಲಾಲ್ ಮತ್ತು ಪ್ರಕಾಶ್ ಅವರು ಬ್ರಿಜ್ ಭೂಷಣ್ ಬಳಗದವರಾಗಿದ್ದಾರೆ. ರೈಲ್ವೆ ಕ್ರೀಡಾ ನಿಯಂತ್ರಣ ಮಂಡಳಿ (ಆರ್‌ಎಸ್‌ಪಿಬಿ) ಕಾರ್ಯದರ್ಶಿ ಪ್ರೇಮ್ ಚಂದ್ ಲೋಚಬ್ ಪ್ರತಿಸ್ಪರ್ಧಿಯಾಗಿದ್ದಾರೆ.
ಕುಟುಂಬದವರು ಸ್ಪರ್ಧಿಸುತ್ತಿಲ್ಲ:ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಸಿಂಗ್ ತಮ್ಮ ಕುಟುಂಬದಿಂದ ಯಾರು ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ಕುಟುಂಬದಿಂದ ಯಾರೂ ಚುನಾವಣೆಯಲ್ಲಿ ಸ್ಪರ್ಧಿಸ ಬಾರದು ಎಂದು ಕುಸ್ತಿ ಪಟುಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
ಚುನಾವಣಾಧಿಕಾರಿ ಮತ್ತು ಮಾಜಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನ್ಯಾಯಾಧೀಶ ಮಹೇಶ್ ಮಿತ್ತಲ್ ಕುಮಾರ್ ಮಂಗಳವಾರ 15 ಹುದ್ದೆಗಳಿಗೆ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದರು.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ: