ನವದೆಹಲಿ: ಭಾರತ ಫುಟ್ಬಾಲ್ ತಂಡವು 2023 ರ ತ್ರಿ-ರಾಷ್ಟ್ರ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯನ್ನು ಕಿರ್ಗಿಜ್ ಗಣರಾಜ್ಯವನ್ನು 2-0 ಅಂತರದಿಂದ ಸೋಲಿಸಿದೆ. ಮಂಗಳವಾರ ಮಣಿಪುರದ ಇಂಫಾಲ್‌ನಲ್ಲಿರುವ ಖುಮಾನ್ ಲ್ಯಾಂಪಕ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಿತು. ಪಂದ್ಯದ ವೇಳೆ 30,000 ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಸೇರಿದ್ದರು.
ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು. ಎದುರಾಳಿ ತಂಡಕ್ಕೆ ಒಂದೂ ಗೋಲ್ ದಾಖಲಿಸಲು ಬಿಡದೇ ಉತ್ತಮ ರಕ್ಷಣಾತ್ಮಕ ಆಟದ ಪ್ರದರ್ಶನವನ್ನೂ ನೀಡಿತು. 34ನೇ ಮತ್ತು 84ನೇ ನಿಮಿಷದಲ್ಲಿ ಭಾರತ ಎರಡು ಸುಲಭ ಗೋಲ್ ದಾಖಲು ಮಾಡಿತು. ಇದು ಪಂದ್ಯದ ಗೆಲುವಿಗೆ ಕಾರಣವಾಯಿತು.
ಕಿರ್ಗಿಜ್ ಗಣರಾಜ್ಯದ ವಿರುದ್ಧ 34ನೇ ನಿಮಿಷದಲ್ಲಿ ಸೆಂಟರ್ ಬ್ಯಾಕ್ ಸಂದೇಶ್ ಜಿಂಗಾನ್ ಮೊದಲ ಗೋಲು ದಾಖಲಿಸಿದರು. ಬ್ರಾಂಡನ್ ಫೆರ್ನಾಂಡಿಸ್ ಫುಟ್‌ಬಾಲ್ ಅನ್ನು ಜಿಂಗನ್‌ಗೆ ಪಾಸ್ ಮಾಡಿದರು. ಜಿಂಗನ್ ಯಾವುದೇ ತಪ್ಪು ಮಾಡದೆ ಗೋಲ್ ಕೀಪರ್ ಕಣ್ತಪ್ಪಿಸಿ ಗೋಲ್ ಪಡೆದುಕೊಂಡರು. ಜಿಂಗನ್ ಕಿಕ್ ಎಷ್ಟು ವೇಗವಾಗಿತ್ತು ಎಂದರೆ ಕಿರ್ಗಿಜ್ ಗೋಲ್‌ಕೀಪರ್ ಟೊಕೊಟೇವ್ ಎರ್ಜಾನ್ ಬಾಲ್ ತನ್ನತ್ತ ಬಂದದ್ದೇ ಅರಿವಿಗೆ ಬಂದಿರಲಿಲ್ಲ. 84ನೇ ನಿಮಿಷದಲ್ಲಿ ಭಾರತ ಎರಡನೇ ಗೋಲು ದಾಖಲಿಸಿತು.
ಗೆಲುವಿನ ಬಳಿಕ ಮಾತನಾಡಿದ ಭಾರತದ ಕೋಚ್ ಇಗೊರ್ ಸ್ಟಿಮಾಕ್, 'ತಂಡದ ಎಲ್ಲಾ ಆಟಗಾರರು ಅಮೋಘ ಆಟ ಪ್ರದರ್ಶಿಸಿದರು. ತಂಡಕ್ಕೆ ಬೇಕಾದ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ' ಎಂದಿದ್ದಾರೆ.
ಗೆಲುವಿನ ನಂತರ ಮಾತನಾಡಿದ ನಾಯಕ ಸುನಿಲ್ ಛೆಟ್ರಿ, 'ಇಡೀ ತಂಡ ಇಂಫಾಲ್‌ನಲ್ಲಿ ಆಡುವುದನ್ನು ಆನಂದಿಸಿದೆ. ಪ್ರೇಕ್ಷಕರು ತಂಡವನ್ನು ಸಾಕಷ್ಟು ಬೆಂಬಲಿಸಿದರು. ಇದರಿಂದಾಗಿ ಆಟಗಾರರ ಉತ್ಸಾಹವು ಪಂದ್ಯದುದ್ದಕ್ಕೂ ಗೋಚರಿಸಿತು' ಎಂದಿದ್ದಾರೆ.