ಹರಿದ್ವಾರ: ಭಾರತ ಮಹಿಳಾ ಹಾಕಿ ತಂಡ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೋಲುತ್ತಿದ್ದಂತೆ ಕೆಲವು ಕಿಡಿಗೇಡಿಗಳು ಒಲಿಂಪಿಕ್ಸ್ನಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ ಮೊದಲ ಭಾರತೀಯೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ವಂದನಾ ಕಟಾರಿಯಾ ಕುಟುಂಬಸ್ಥರಿಗೆ ಜಾತಿ ನಿಂದನೆ ಮಾಡಿ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಹರಿದ್ವಾರ ಜಿಲ್ಲೆಯ ರೋಷನ್ಬಾದ್ನಲ್ಲಿರುವ ವಂದನಾ ಮನೆಯ ಮುಂದೆ ಒಂದಿಬ್ಬರು ಕಿಡಿಗೇಡಿಗಳು ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಘಟನೆಯ ಕುರಿತು ವಂದನಾ ಸಹೋದರ ಚಂದ್ರಶೇಖರ್ ಕಟಾರಿಯಾ ಸಿದ್ಕಲ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿ, ನಂತರ ದೂರು ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಪಟಾಕಿ ಸಿಡಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಂದನಾ ಮನೆಯ ಮುಂದೆ ಪಟಾಕಿ ಸಿಡಿಸಿದ್ದನ್ನು ಸಿದ್ಕಲ್ ಪೊಲೀಸ್ ಠಾಣೆಯ ಎಸ್ಹೆಚ್ಒ ಲಕ್ಪತ್ ಸಿಂಗ್ ಖಚಿತ ಪಡಿಸಿದ್ದು, ಚಂದ್ರಶೇಖರ್ ಅವರ ದೂರಿನ ಅನ್ವಯ ಪಟಾಕಿ ಸಿಡಿಸಿದ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: "ಸೆಮಿಫೈನಲ್ ಸೋಲಿನಿಂದ ನಿರಾಶರಾಗಬೇಡಿ": ಹಾಕಿ ಕ್ಯಾಪ್ಟನ್ ರಾಣಿ ಜೊತೆ ನಮೋ ಮಾತು