ಬ್ಯಾಂಕಾಕ್ (ಥಾಯ್ಲೆಂಡ್): ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ 2023 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಲಕ್ಷ್ಯ ಸೇನ್ ಸೆಮಿಫೈನಲ್‌ಗೆ ಪ್ರವೇಶಿದ್ದಾರೆ. ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ಅವರನ್ನು ನೇರ ಗೇಮ್ಗಳಲ್ಲಿ ಸೋಲಿಸಿದರು. ಇದೇ ಚಾಂಪಿಯನ್ ಶಿಪ್ನಲ್ಲಿ ಭಾರತದ ಕಿರಣ್ ಜಾರ್ಜ್ ಫ್ರಾನ್ಸ್‌ನ ತೋಮಾ ಜೂನಿಯರ್ ಪೊಪೊವ್ ವಿರುದ್ಧ ಸೋಲನುಭವಿಸಿದರು. ಇದರಿಂದ ಥಾಯ್ಲೆಂಡ್ ಓಪನ್ 2023 ಅವರ ಪ್ರಯಾಣವು ಕೊನೆಯಾಯಿತು.
2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ, ಥಾಯ್ಲೆಂಡ್ ರಾಜಧಾನಿ ಹುವಾಮಾರ್ಕ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮಲೇಷ್ಯಾ ಎದುರಾಳಿಯನ್ನು 21-19, 21-11 ಸೆಟ್‌ಗಳಿಂದ ಸೋಲಿಸಿದರು. ಶನಿವಾರ ಚೀನಾದ ಲು ಗುವಾಂಗ್ ಜು ಮತ್ತು ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್ಸರ್ನ್ ಎದುರಾಗುತ್ತಿದ್ದು, ಇದರಲ್ಲಿ ಗೆದ್ದವರ ಜೊತೆ ಲಕ್ಷ್ಯ ಸೇನ್ ಆಡಲಿದ್ದಾರೆ.
ಲಕ್ಷ್ಯ ಸೇನ್ ಲಿಯಾಂಗ್ ಜುನ್ ಹಾವೊ ವಿರುದ್ಧ ತೀವ್ರ ಪೈಪೋಟಿಯನ್ನು ಎದುರಿಸಿದರು. 10-10ರ ಸಮಬಲದಲ್ಲಿ ಇಬ್ಬರ ಹೋರಾಟ ಮುಂದುವರೆದಿತ್ತು. ನಂತರ ಲಿಯಾಂಗ್ ಜುನ್ ಹಾವೊ ಆರು ಅಂಕಗಳ ಮುನ್ನಡೆ ಪಡೆದುಕೊಂಡರು. ಆದರೆ, ಮುನ್ನಡೆಯನ್ನು ಸೇನ್ಹೆಚ್ಚುಹೊತ್ತು ಬಿಟ್ಟುಕೊಡದೇ 17-17 ರ ಸಮಬಲ ಸಾಧಿಸಿದರು. ನಂತರ ಮುನ್ನಡೆ ಪಡೆದುಕೊಂಡ ಲಕ್ಷ್ಯ 21-19 ರಿಂದ ಮೊದಲ ಸೆಟ್ನ್ನು ವಶ ಪಡಿಸಿಕೊಂಡರು.
ಎರಡನೇ ಸೆಟ್ನಲ್ಲೂ ಇಬ್ಬರ ನಡುವೆ ಆರಂಭದಲ್ಲಿ ತೀವ್ರ ಹೋರಾಟ ನಡೆಯಿತು. 11 ಅಂಕದ ವರೆಗೆ ಲಿಯಾಂಗ್ ಬಿಟ್ಟುಕೊಡದೇ ಆಡಿದರು. ಆದರೆ ನಂತರ ಲಕ್ಷ್ಯ ಸೇನ್ ಮುನ್ನಡೆ ತೆಗೆದುಕೊಂಡು ಪಂದ್ಯವನ್ನು ತಮ್ಮ ಕಡೆಗೆ ತಿರುಗಿಸಿಕೊಂಡರು. 11ನೇ ಅಂಕದ ನಂತರ ಮಲೇಷ್ಯಾದ ಲಿಯಾಂಗ್ ಜುನ್ ಹಾವೊಗೆ ಯಾವುದೇ ಪಾಯಿಂಟ್ ಕೊಡದ ಸೇನ್ ಸೆಮಿಫೈನಲ್‌ಗೆ ಪ್ರವೇಶ ಪಡೆದರು.