ಭುವನೇಶ್ವರ್ (ಒಡಿಶಾ): ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ತಾನು ತಂದೆ ಆಗಲಿರುವ ವಿಚಾರವನ್ನು ವಿಭಿನ್ನವಾಗಿ ತಿಳಿಸಿದ್ದಾರೆ. ಅವರು ತಿಳಿಸಿರುವ ವಿಧಾನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಇಂಟರ್ ಕಾಂಟಿನೆಂಟಲ್ ಕಪ್ 2023 ನಡೆಯುತ್ತಿರುವ ವೇಳೆ ಗೋಲ್ ಗಳಿಸಿದ ಚೆಟ್ರಿ ವಿಭಿನ್ನ ಸಂಭ್ರಮದ ಮೂಲಕ ಪತ್ನಿಯ ಗರ್ಭಾವಸ್ಥೆಯ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ನಡೆಯುತ್ತಿರುವ ಇಂಟರ್ ಕಾಂಟಿನೆಂಟಲ್ ಕಪ್‌ನಲ್ಲಿ ಭಾರತವು ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಆಟದ 81 ನೇ ನಿಮಿಷದಲ್ಲಿ ಚೆಟ್ರಿಯ ಮ್ಯಾಜಿಕ್ ಗೋಲ್ನಿಂದ ವನವಾಟು ವಿರುದ್ಧ 1-0 ಅಂತರದಿಂದ ಗೆಲುವು ದಾಖಲಿಸಿದೆ.
ಈ ಗೆಲುವು ಭಾರತದ ಅಭಿಮಾನಿಗಳಿಗೆ ಸಂತಸವನ್ನು ಕೊಟ್ಟರೆ, ಅವರ ಸಂಭ್ರಮಾಚರಣೆಯೂ ಅಭಿಮಾನಿಗಳ ಹೃದಯ ಗೆದ್ದಿದೆ ಎಂದೇ ಹೇಳಬಹುದು. ಎಡಗಾಲಿನಿಂದ ಒದ್ದ ಚೆಂಡು ನೇರವಾಗಿ ಗೋಲನ್ನು ಪ್ರವೇಶಿಸುತ್ತದೆ. ನಂತರ ಬಾಲ್ನತ್ತ ಓಡಿಹೋದ ಚೆಟ್ರಿ ಬಾಲ್ನ್ನು ಕೈಯಲ್ಲಿ ಎತ್ತಿಕೊಂಡು ಟೀಶರ್ಟ್ನ ಒಳಗೆ ಹಾಕಿ ಹೊಟ್ಟೆಯ ಬಾಗಕ್ಕೆ ಇಟ್ಟುಕೊಂಡರು.
ನಂತರ ಪಂದ್ಯ ವೀಕ್ಷಣೆಗೆ ಬಂದಿದ್ದ ಮಡತಿಯತ್ತ ಕೈ ಬೀಸಿ ಫ್ಲೈಯಿಂಗ್ ಕಿಸ್ ಕೊಟ್ಟರು. ಇದಕ್ಕೆ ಡಗೌಟ್ನಲ್ಲಿ ನಿಂತಿದ್ದ ಅವರ ಮಡದಿ ಸಹ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಪಂದ್ಯದ ನಂತರ, ಛೆಟ್ರಿ ಅವರು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಘೋಷಿಸಿದರು, "ನಾನು ಮತ್ತು ನನ್ನ ಹೆಂಡತಿ ಮಗುವಿನ ನಿರೀಕ್ಷೆಯಲ್ಲಿದ್ದೇವೆ, ನಾನು ಇದನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅಭಿಮಾನಿಗಳ ಅಶೀರ್ವಾದವನ್ನು ಬೇಡುತ್ತೇನೆ" ಎಂದಿದ್ದಾರೆ.