ನವದೆಹಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಮೇರಿ ಕೋಮ್ ಹೇಳಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಶುಭ ಕೋರಿದ್ದಾರೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸುವ ವಿಶ್ವ ಚಾಂಪಿಯನ್‌ಶಿಪ್ 2023 ಈ ಬಾರಿ ಮೇ ತಿಂಗಳ 1 ರಿಂದ ಆರಂಭವಾಗಿ 14ರ ವರೆಗೆ ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ನಡೆಯಲಿದೆ.
ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರು 2023 ರಲ್ಲಿ ನಡೆಲಿರುವ ಐಬಿಎಯಿಂದ ಆಯೋಜನೆ ಗೊಳ್ಳುವ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಗಾಯದ ಸಮಸ್ಯೆಯಿಂದ ನಾನು ಈ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಮೇರಿ ಕೋಮ್ ಹೇಳಿದ್ದಾರೆ.
ಗಾಯದ ಸಮಸ್ಯೆ:ವಿಶ್ವ ಚಾಂಪಿಯನ್ಶಿಪ್ನಿಂದ ಹೊರಗುಳಿಯಲು ನೋವಿನ ಸಮಸ್ಯೆ ಕಾರಣ ಎಂದು ತಿಳಿಸಿದ್ದಾರೆ. ಯಾವಾಗ ಮತ್ತು ಹೇಗೆ ಗಾಯವಾಗಿದೆ ಎಂಬುದರ ಬಗ್ಗೆ ಅವರು ಸ್ಪಷ್ಟಪಡಿಸಿಲ್ಲ. ಶೀಘ್ರದಲ್ಲೇ ಫಿಟ್ ಆಗಿ ಆಟಕ್ಕೆ ಮರಳುವ ಭರವಸೆ ನೀಡಿದ್ದಾರೆ. ಒಟ್ಟು 8 ಪದಕಗಳನ್ನು ಗೆದ್ದಿರುವ 40 ವರ್ಷದ ಮೇರಿ ಕೋಮ್ ಈ ಬಾರಿ ಗಾಯದ ಸಮಸ್ಯೆಯಿಂದ ಹೊರಗುಳಿಯುತ್ತಿರುವುದು ಬೇಸರದ ಸಂಗತಿಯಾಗಿದೆ.
ಗಾಯದ ಸಮಸ್ಯೆಯಿಂದ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರ ಬಂದಿದ್ದ ಕೋಮ್:ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ವೇಳೆ ಗಾಯಗೊಂಡು ಸ್ಪರ್ಧೆಯಿಂದ ಹೊರಗುಳಿದಿದ್ದರು. ಮುಂದಿನ ಕಾಮನ್‌ವೆಲ್ತ್ ಗೇಮ್ಸ್ ಆಡಲು ಇಚ್ಛಿಸಿರುವ ಕೋಮ್ ಬೇಗ ಚೇತರಿಸಿಕೊಳ್ಳುವ ಬಗ್ಗೆ ಹೇಳಿಕೊಂಡಿದ್ದಾರೆ. ಇದರೊಂದಿಗೆ ಭಾಗವಹಿಸಿದವರಿಗೆ ಶುಭ ಹಾರೈಸಿ ಈ ಚಾಂಪಿಯನ್ಶಿಪ್ನಿಂದ ಇನ್ನಷ್ಟು ಚಾಂಪಿಯನ್ಗಳನ್ನು ಕಾಣಬಹುದು ಎಂದಿದ್ದಾರೆ.
ಕಳೆದ ವರ್ಷವೂ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್‌ನಿಂದ ಮೇರಿ ಕೋಮ್ ಹೊರಗುಳಿಯಬೇಕಾಯಿತು. ಮೊಣಕಾಲಿನ ಗಾಯದಿಂದಾಗಿ ಅವರು ಆಯ್ಕೆ ಸುತ್ತಿನಿಂದಲೇ ಹೊರಗುಳಿಯಬೇಕಾಯಿತು. 48 ಕೆಜಿ ಸೆಮಿಫೈನಲ್‌ನ ಆರಂಭಿಕ ಸುತ್ತಿನಲ್ಲಿ, ಆಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎಡ ಮೊಣಕಾಲು ತಿರುಚಿತ್ತು. ಇದರಿಂದ ಕಾಮನ್‌ವೆಲ್ತ್ ಗೇಮ್ಸ್ನ ಮೊದಲ ಸುತ್ತಿನಲ್ಲೇ ಮೇರಿ ಕೋಮ್ ಹೊರಗುಳಿಯಬೇಕಾಯಿತು.
ಮೇರಿ ಕೋಮ್ ಹೆಸರಿನಲ್ಲಿವೆ ಹಲವು ದಾಖಲೆಗಳು:ಮೇರಿ ಕೋಮ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತದ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ಒಬ್ಬರಾದ ಮೇರಿ ಕೋಮ್ ವಿಶ್ವ ಚಾಂಪಿಯನ್‌ಶಿಪ್‌ಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬಾಕ್ಸರ್ ಆಗಿದ್ದಾರೆ. ಮೊದಲ ಏಳು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆ ಇವರ ಹೆಸರಿನಲ್ಲಿದೆ. ಎಂಟು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದ ಏಕೈಕ ಬಾಕ್ಸರ್ ಆಗಿದ್ದಾರೆ. ಅದೂ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಈ ಸಾಧನೆಯನ್ನು ಯಾರೂ ದಾಖಲಿಸಿಲ್ಲ.
ಮೇರಿ ಕೋಮ್ 2014 ರ ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್. 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದರು.
ಮೂರು ಮಕ್ಕಳ ತಾಯಿಯಾಗಿದ್ದರೂ ಬಾಕ್ಸಿಂಗ್ನಲ್ಲಿ ಸಕ್ರಿಯರಾಗಿರುವ 40 ವರ್ಷದ ಮೇರಿ ಕೋಮ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಅರ್ಜುನ ಪ್ರಶಸ್ತಿ ಮತ್ತು ಖೇಲ್ ರತ್ನ ಪ್ರಶಸ್ತಿಗಳು ಸಂದಿವೆ. ಲೆಜೆಂಡರಿ ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಹಿರಿಯ ಟೇಬಲ್ ಟೆನ್ನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ಅಥ್ಲೀಟ್ ಆಯೋಗದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿರುವ ಕಾರಣದಿಂದ ಕಾರ್ಯಕಾರಿ ಮಂಡಳಿಯ ಭಾಗವಾಗಿದ್ದಾರೆ.
ಇದನ್ನೂ ಓದಿ:ಕ್ಯಾನ್ಸರ್ ಬಗ್ಗೆ ಬಾಕ್ಸರ್ ಮೇರಿ ಕೋಮ್ ಜಾಗೃತಿ ಅಭಿಯಾನ