ನವದೆಹಲಿ: ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಫೆಡರೇಷನ್ನ ಕೆಲವು ತರಬೇತುದಾರರ ವಿರುದ್ಧ ಕುಸ್ತಿಪಟುಗಳು ಹಾಗೂ ಮಹಿಳಾ ಕೋಚ್‌ಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪವೂ ಸೇರಿದಂತೆ ಗಂಭೀರ ಆರೋಪಗಳ ಕುರಿತು ಮುಂದಿನ 72 ಗಂಟೆಗಳಲ್ಲಿ ವಿವರಣೆ ಕಳುಹಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟಕ್ಕೆ (ಡಬ್ಲ್ಯುಎಫ್‌ಐ) ಸೂಚಿಸಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದ್ದು, ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ಮಾಡಿರುವ ಆರೋಪಗಳ ಬಗ್ಗೆ ವಿವರಣೆ ಸಲ್ಲಿಸುವಂತೆ ಭಾರತದ ಉನ್ನತ ರಾಷ್ಟ್ರೀಯ ಕ್ರೀಡಾ ಸಂಸ್ಥೆಯು ನೋಟಿಸ್‌ನಲ್ಲಿ ಫೆಡರೇಶನ್ಗೆ ತಿಳಿಸಿದೆ. ಫೆಡರೇಶನ್ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ 30 ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಕಾರಣಗಳು ಮತ್ತು ನಿದರ್ಶನಗಳನ್ನು ಕೇಳಿದೆ.
ಇದರ ಮಧ್ಯೆ ಜ.18 ರಿಂದ 41 ಕುಸ್ತಿಪಟುಗಳು ಮತ್ತು 13 ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಲಖನೌನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠ ಕೇಂದ್ರದಲ್ಲಿ (NCOE) ಪ್ರಾರಂಭವಾಗಬೇಕಿದ್ದ ಮಹಿಳಾ ರಾಷ್ಟ್ರೀಯ ಕುಸ್ತಿ ತರಬೇತಿ ಶಿಬಿರವನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಬುಧವಾರ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಭೇಟಿ ನೀಡಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥರಿಂದ ಲೈಂಗಿಕ ಕಿರುಕುಳದ ಆರೋಪದ ವಿರುದ್ಧ ಪ್ರತಿಭಟಿಸುವ ಕುಸ್ತಿಪಟುಗಳಿಗೆ ಒಗ್ಗಟ್ಟು ವ್ಯಕ್ತಪಡಿಸಿರುವ ಅವರು, ಒಲಿಂಪಿಕ್ನಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಭಾರತ ದೇಶವನ್ನು ಎತ್ತರಕ್ಕೆ ಕೊಂಡೊಯ್ದ ಮಹಿಳೆಯರು ನ್ಯಾಯ ಕೇಳಲು ಜಂತರ್ ಮಂತರ್ನಲ್ಲಿ ಸಮಾವೇಶಗೊಂಡಿದ್ದಾರೆ ಎಂದರೆ ನನಗೆ ಆಘಾತವಾಗಿದೆ ಎಂದು ಹೇಳಿದ್ದಾರೆ.