ಲಖನೌ :ಎರಡು ಒಲಿಂಪಿಕ್ ಪದಕ ವಿಜೇತೆ, ಬ್ಯಾಡ್ಮಿಂಟನ್ ಸ್ಟಾರ್ ಪಿ ವಿ ಸಿಂಧು ಅವರು ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದಲ್ಲಿ ಭಾರತದವರೇ ಆದ 20 ವರ್ಷದ ಯುವ ಶಟ್ಲರ್ ಮಾಳವಿಕ ಬನ್ಸೋಡ್ ವಿರುದ್ಧ ಸಿಂಧು 21-13, 21-16ರಲ್ಲಿ ಗೆಲುವು ಸಾಧಿಸಿದ್ದಾರೆ.
ಏಕಮುಖವಾಗಿದ್ದ ಫೈನಲ್ ಪಂದ್ಯವು ಕೇವಲ 35 ನಿಮಿಷಗಳಲ್ಲೇ ಮುಕ್ತಾಯಗೊಂಡಿತ್ತು. 2017ರಲ್ಲಿ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 300 ಟೂರ್ನಿ ಗೆದ್ದ ಬಳಿಕ ಇದು ಮಾಜಿ ವಿಶ್ವ ಚಾಂಪಿಯನ್ ಸಿಂಧು ಅವರಿಗೆ ಒಲಿದ ಎರಡನೇ ಸೈಯದ್ ಮೋದಿ ಪ್ರಶಸ್ತಿಯಾಗಿದೆ. ಎರಡೂ ಸೆಟ್ಗಳಲ್ಲೂ ಮಾಳವಿಕ ವಿರುದ್ಧ ಸಿಂಧು ಪಾರಮ್ಯ ಮೆರೆದರು.
ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾದ ಇವ್ಗೇನಿಯಾ ಕೊಸೆತ್ಸ್ಕಾಯಾ ವಿರುದ್ಧ 21-11ರಲ್ಲಿ ಮೊದಲ ಗೇಮ್ ಜಯಿಸಿದ್ದರು. ಈ ವೇಳೆ ಪಂದ್ಯದಲ್ಲಿ ಮುಂದುವರಿಯಲಾಗದೆ ರಷ್ಯನ್ ಆಟಗಾರ್ತಿ ನಿವೃತ್ತಿಗೊಂಡಿದ್ದರಿಂದ ಸಿಂಧು ಫೈನಲ್ ದಾರಿ ಸುಗಮವಾಗಿತ್ತು. ಇನ್ನೊಂದೆಡೆ ಮಾಳವಿಕ ಬನ್ಸೋಡ್ ಸೆಮಿಫೈನಲ್ನಲ್ಲಿ ತಮ್ಮ ಸಹವರ್ತಿ 16 ವರ್ಷದ ಅನುಪಮ ಉಪಾಧ್ಯಾಯ ವಿರುದ್ಧ 3 ಸೆಟ್ಗಳ ಪಂದ್ಯದಲ್ಲಿ ಗೆಲುವು ಸಾಧಿಸಿ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದ್ದರು.