ಬೆಂಗಳೂರು: ತೆಲುಗು ಟೈಟಾನ್ಸ್ ತಂಡವನ್ನು 48-33 ಅಂಕಗಳಿಂದ ಮಣಿಸಿದ ಯುಪಿ ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಎರಡನೇ ಜಯ ದಾಖಲಿಸಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಯೋಧಾಸ್‌ನ ಸುರೇಂದರ್ ಗಿಲ್ (14) ಮತ್ತು ಟೈಟಾನ್ಸ್ ಸ್ಟಾರ್ ಆಟಗಾರ ಪವನ್ ಶೆಹ್ರಾವತ್ (11) ಇಬ್ಬರೂ ಸೂಪರ್ 10 ಅಂಕ ಗಳಿಸಿ ಮಿಂಚಿದರು.
ಪಿಕೆಎಲ್‌ನ ಕಳೆದ ನಾಲ್ಕು ಆವೃತ್ತಿಗಳಲ್ಲಿ ಹೆಚ್ಚು ಅಂಕ ಗಳಿಸಿದ್ದ ರೈಡರ್‌ಗಳಾದ ಪರ್ದೀಪ್ ನರ್ವಾಲ್ ಮತ್ತು ಪವನ್ ಶೆಹ್ರಾವತ್ ನಡುವಿನ ಕಾಳಗವೆಂದೇ ಬಿಂಬಿತವಾಗಿದ್ದ ಪಂದ್ಯ ಇದಾಗಿತ್ತು. ಮೊದಲ ದಾಳಿಯಲ್ಲೇ ಶೆಹ್ರಾವತ್ ಅವರನ್ನು ಟ್ಯಾಕಲ್ ಮಾಡಿದ ಯೋಧಾಸ್ ತಂಡ ಟೈಟಾನ್ಸ್ ಸಮನ್ವಯತೆಯ ಕೊರತೆಯನ್ನು ಚಾಕಚಕ್ಯತೆಯಿಂದ ಬಳಸಿಕೊಂಡಿತು.
ಅಂಕಿತ್ ಮತ್ತು ಮಿಲಾದ್ ಜಬ್ಬಾರಿ ಅವರನ್ನು ಗಿಲ್ ತಮ್ಮ ಸೂಪರ್ ರೈಡ್ ಮೂಲಕ ಔಟ್ ಮಾಡಿದ್ದು, ಯೋಧಾಸ್ಗೆ ದೊಡ್ಡ ಮುನ್ನಡೆ ಸಾಧಿಸಲು ನೆರವಾಯಿತು. ಈ ಸಂದರ್ಭದಲ್ಲಿ ಗಿಲ್‌ರನ್ನು ಸೂಪರ್ ಟ್ಯಾಕಲ್ ಮಾಡಿದ ಮಿಲಾದ್, ಟೈಟಾನ್ಸ್‌ಗೆ ಕೊಂಚ ಚೇತರಿಕೆ ನೀಡಿದರು. ಟೈಟಾನ್ಸ್‌ನ ಮೋಹಿತ್ ಮತ್ತು ಮಿಲಾದ್ ಜೋಡಿಯ ಕಠಿಣ ರಕ್ಷಣಾತ್ಮಕ ಆಟದ ಹೊರತಾಗಿಯೂ ಯೋಧಾಸ್ ಎರಡನೇ ಬಾರಿ ಆಲೌಟ್ ಅಂಕ ಗಳಿಸಿತು. ಹೀಗಾಗಿ ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇರುವಾಗ ಯೋಧಾಸ್ ಒಂಬತ್ತು ಅಂಕಗಳ ಮುನ್ನಡೆಯಲ್ಲಿತ್ತು.
ನಂತರದ ಯಾವುದೇ ಹಂತಗಳಲ್ಲಿಯೂ ಯೋಧಾಸ್ ತಂಡ ಟೈಟಾನ್ಸ್‌ಗೆ ಕಮ್‌ಬ್ಯಾಕ್ ಅವಕಾಶ ಸಿಗದಂತೆ ನೋಡಿಕೊಂಡಿತು. ಪಂದ್ಯ ಮುಗಿಯಲು ಎರಡು ನಿಮಿಷಗಳು ಬಾಕಿ ಇರುವಾಗ ಟೈಟಾನ್ಸ್ ಮೂರನೇ ಬಾರಿ ಆಲೌಟ್ ಆದ ಪರಿಣಾಮ ಯೋಧಾಸ್ ಮತ್ತಷ್ಟು ಮುನ್ನಡೆಯೊಂದಿಗೆ ಅರ್ಹ ಜಯ ಪಡೆಯಿತು.