ಹೈದರಾಬಾದ್ :ಕಬಡ್ಡಿ ಹಬ್ಬಕ್ಕೆ ವೇದಿಕೆ ಸಿದ್ಧವಾಗಿದೆ. ವಿವೋ ಪ್ರೋ ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ. ಬೆಂಗಳೂರು ಬುಲ್ಸ್ ತಂಡ ಸಹ ಪ್ರಶಸ್ತಿ ಗೆಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಕೊರೊನಾ ಕಾರಣದಿಂದ ಹಿಂದಿನ ಎರಡು ವರ್ಷಗಳ ಆವೃತ್ತಿ ನಡೆದಿರಲಿಲ್ಲ. ಸೀಸನ್ 6 ಚಾಂಪಿಯನ್ಸ್ ಮತ್ತು ಈ ವರ್ಷದ ಫೆವರೇಟ್ ತಂಡ ಬೆಂಗಳೂರು ಬುಲ್ಸ್ ಇಂದಿನಿಂದ ತವರಿನಿಂದಲೇ ಅಭಿಯಾನ ಆರಂಭಿಸಲಿದೆ.
ಕೊರೊನಾ ಸೋಂಕಿನ ಕಾರಣ ಪ್ರಪಂಚದಲ್ಲಿಯೇ ಕ್ರೀಡಾ ಚಟುವಟಿಕೆಗೆ ಬ್ರೇಕ್ ಬಿದ್ದಿತ್ತು. ಈಗ ಪರಿಸ್ಥಿತಿ ತಹಬದಿಗೆ ಬಂದಿರುವ ಕಾರಣ ಒಂದೊಂದೇ ಪಂದ್ಯಾವಳಿ ಆರಂಭವಾಗುತ್ತಿವೆ. ಕೊರೊನಾ ನಿಯಮಗಳನ್ನು ಪಾಲಿಸುತ್ತ ಕಟ್ಟುನಿಟ್ಟಾದ ಬಯೋ ಬಬಲ್ ವ್ಯವಸ್ಥೆಯಲ್ಲಿ ತಂಡಗಳು ಕಣಕ್ಕೆ ಇಳಿಯಲಿವೆ.
ಇಂದು ರಾತ್ರಿ 7:30 ಗಂಟೆಗೆ ಯು ಮುಂಬಾ ತಂಡದೊಂದಿಗೆ ಬೆಂಗಳೂರು ಬುಲ್ಸ್ ಸೆಣೆಸಾಡಲಿದೆ. ಈ ಆರಂಭಿಕ ಮ್ಯಾಚ್ ಸೇರಿ ಎಲ್ಲ ಪಂದ್ಯಗಳು ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿವೆ.
ಆಯೋಜಕರು ಪಂದ್ಯಾವಳಿಯ ಮೊದಲ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಬುಲ್ಸ್ ತಂಡ ಡಿಸೆಂಬರ್‌ನಲ್ಲಿ 4 ಮತ್ತು ಜನವರಿಯಲ್ಲಿ 7 ಪಂದ್ಯಗಳು ಸೇರಿ ಮೊದಲಾರ್ಧದಲ್ಲಿ ಬುಲ್ಸ್ 11 ಪಂದ್ಯಗಳನ್ನು ಆಡಲಿದೆ.
ಬೆಂಗಳೂರು ಬುಲ್ಸ್ ಶಕ್ತಿ :ಪ್ರೋ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಸದಾ ಫೆವರೇಟ್ ತಂಡ. ಜನವರಿ 2019ರಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಅನ್ನು ಸೋಲಿಸುವ ಮೂಲಕ ಸೀಸನ್ 6ರಲ್ಲಿ ಚಾಂಪಿಯನ್ ಆಗಿತ್ತು. 2ನೇ ಸೀಸನ್‌ನಲ್ಲಿ ರನ್ನರ್ ಅಪ್ ಆಗಿದ್ದರೆ, ಸೀಸನ್ 1 ಮತ್ತು 7ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು.
ಈ ಬಾರಿ ಅದ್ಭುತ ತಂಡ :ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರನ್ನ ಸೇರ್ಪಡೆ ಮಾಡಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿದ್ದಾರೆ. ರೆಕಾರ್ಡ್ ಬ್ರೇಕಿಂಗ್ ರೈಡರ್ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡೆಸಲಿದ್ದಾರೆ.
3ನೇ ಸೀಸನ್‌ನಿಂದ ಪವನ್ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಪವನ್ ಹೆಸರು ಮಾಡಿದ್ದಾರೆ. ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಭಾಗವಾಗಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಪ್ರೋ ಕಬಡ್ಡಿಸೀಸನ್ 6 ಮತ್ತು 7ರಲ್ಲಿ ಕ್ರಮವಾಗಿ "ಅತ್ಯಂತ ಮೌಲ್ಯಯುತ ಆಟಗಾರ" ಮತ್ತು "ಅತ್ಯುತ್ತಮ ರೈಡರ್" ಪುರಸ್ಕಾರಕ್ಕೆ ಪಾತ್ರವಾಗಿದ್ದರು.
ಪ್ರೋ ಕಬಡ್ಡಿಯ ಅತ್ಯುತ್ತಮ ರೈಡರ್‌ಗಳಲ್ಲಿ ಪವನ್ಗೆ ಅಗ್ರಸ್ಥಾನವಿದೆ. ಇನ್ನು ಡಿಫೆಂಡರ್ ಮಹೇಂದರ್ ಸಿಂಗ್ ಬೆಂಗಳೂರು ಬುಲ್ಸ್ ಶಕ್ತಿ. ಕೋಚ್ ರಣಧೀರ್ ಸಿಂಗ್ ಸೆಹ್ರಾವತ್ ಅವರಿಂದ "ಬುಲ್ಡೋಜರ್" ಎಂದೇ ಕರೆಸಿಕೊಳ್ಳುತ್ತಾರೆ.
ಅರ್ಜುನ ಪ್ರಶಸ್ತಿ ವಿಜೇತ ರಣಧೀರ್ ಲೀಗ್ ಆರಂಭದಿಂದಲೂ ಬುಲ್ಸ್ ತರಬೇತುದಾರರಾಗಿದ್ದವರು. ಅನೇಕ ಯುವ ಆಟಗಾರರನ್ನು ತಮ್ಮ ಗರಡಿಯಲ್ಲಿ ಪಳಗಿಸಿ ಪರಿಚಯಿಸಿದ್ದಾರೆ. ಈ ಭಾರಿ ಬುಲ್ಸ್‌ಗೆ ಅತ್ಯುತ್ತಮ ನಾಯಕ ಮತ್ತು ಅತ್ಯುತ್ತಮ ಕೋಚ್ ಸಂಯೋಜನೆ ಇದೆ. 2014ರಲ್ಲಿ ಪ್ರಾರಂಭವಾದ ಪ್ರೊ. ಕಬಡ್ಡಿ ಹೊಸ ಜನರನ್ನು ತನ್ನ ಕಡೆ ಸೆಳೆದುಕೊಂಡಿತು. ಕಬಡ್ಡಿ ಆಸ್ವಾದಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿತು.
ಡಬ್ಲ್ಯುಎಲ್ ಲೀಗ್ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ ಬುಲ್ಸ್, ಪ್ರೊ ಕಬಡ್ಡಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದೆ. ಈಗ ಮತ್ತೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.
ಕಿಚ್ಚ ಸುದೀಪ್ ಕೊಂಡಾಡಿದ ತಂಡ: ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಸುದೀಪ್ ತಂಡವನ್ನು ಹುರಿದುಂಬಿಸಿದ್ದಾರೆ. 'ನಮ್ಮ ಊರು, ನಮ್ಮ ಆಟ, ನಮ್ಮ ಹುಡುಗರು, ನಮ್ಮ ಬುಲ್ಸ್' ಎನ್ನುತ್ತ ಎಲ್ಲರೂ ಬೆಂಬಲ ನೀಡಲು ಕೇಳಿಕೊಂಡಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನಲ್ಲಿ ಎಂಟ್ರಿ ಕೊಡುವ ಕಿಚ್ಚ, ಸಖತ್ ಡೈಲಾಗ್ ಹೊಡೆದು ಬೆಂಗಳೂರು ಬುಲ್ಸ್ ತಂಡಕ್ಕೆ ಬೆಂಬಲ ನೀಡಿದ್ದಾರೆ.
ಸುದೀಪ್ ಟ್ವಿಟರ್‌ನಲ್ಲಿ ಪ್ರೋಮೋ ಹಂಚಿಕೊಂಡಿದ್ದಾರೆ. ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್.. ಸಪೋರ್ಟ್ ಮಾಡೋಕೆ ರೆಡಿಯಾಗಿ ಕಬಡ್ಡಿ ಫ್ಯಾನ್ಸ್.. ನಿಮ್ಮ ಜೊತೆ ಬೆಂಗಳೂರು ಬುಲ್ಸ್ ಟೀಮ್‌ಗೆ ಬೆಂಬಲ ನೀಡೋಕೆ ನಾನೂ ಕೂಡ ಇರ್ತಿನಿ ಎಂದು ಸುದೀಪ್ ಹೇಳಿದ್ದಾರೆ. ಕೊರೊನಾ ಕಾರಣಕ್ಕಾಗಿ ಪಂದ್ಯಾವಳಿ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ.