ನವದೆಹಲಿ: 19ನೇ ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳನ್ನು ಗೆಲ್ಲುವ ಮೂಲಕ ಅಸಾಧಾರಣ ಪ್ರದರ್ಶನ ನೀಡಿದ ಭಾರತೀಯ ಕ್ರೀಡಾಪಟುಗಳು 'ಡ್ರಗ್ ಮುಕ್ತ ಭಾರತ' ಸಂದೇಶ ಸಾರುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ನವದೆಹಲಿಯ ಮೇಜರ್ ಧ್ಯಾನಚಂದ್ ಸ್ಟೇಡಿಯಂನಲ್ಲಿ ಮಂಗಳವಾರ ಭಾರತೀಯ ಅಥ್ಲೀಟ್ಗಳನ್ನು ಭೇಟಿ ಮಾಡಿದ ಮೋದಿ, ಸಂವಾದ ನಡೆಸಿದರು.
ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ ಮೋದಿ, ಡ್ರಗ್ಸ್ ವಿರುದ್ಧ ರಾಷ್ಟ್ರ ನಡೆಸುತ್ತಿರುವ ಹೋರಾಟದಲ್ಲಿ ಕ್ರೀಡಾಪಟುಗಳು ದೊಡ್ಡ ಪಾತ್ರ ವಹಿಸಬಹುದಾಗಿದ್ದು, ಮಾದಕ ದ್ರವ್ಯ ಮುಕ್ತ ಭಾರತವನ್ನು ಉತ್ತೇಜಿಸುವಂತೆ ಕಿವಿಮಾತು ಹೇಳಿದರು.
"ನಮ್ಮ ದೇಶ ಪ್ರಸ್ತುತ ಡ್ರಗ್ಸ್ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ತೊಡಗಿದೆ. ಅದರ ದುಷ್ಟರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆ. ಕ್ರೀಡಾಪಟುಗಳು ಅರಿವಿಲ್ಲದೆ ತೆಗೆದುಕೊಳ್ಳುವ ಡ್ರಗ್ಸ್‌ನಿಂದ ಅವರ ವೃತ್ತಿಜೀವನ ನಾಶವಾಗುತ್ತದೆ. ನಿಮ್ಮ ಮೂಲಕ (ಕ್ರೀಡಾಪಟುಗಳು) ಯುವಕರಲ್ಲಿ ಜಾಗೃತಿ ಮೂಡಿಸಲು ನಾನು ಬಯಸುತ್ತೇನೆ. ನೀವು ಮಾನಸಿಕ ಶಕ್ತಿ ಮತ್ತು ಬದ್ಧತೆಯ ಆರಾಧ್ಯ ದೈವವಾಗಿದ್ದೀರಿ. ನಿಮ್ಮ ದೈಹಿಕ ಶಕ್ತಿಯನ್ನು ಬಳಸಿಕೊಂಡು ನೀವು ಪದಕಗಳನ್ನು ಗೆಲ್ಲುತ್ತೀರಿ. ಮಾನಸಿಕ ಸಾಮರ್ಥ್ಯವು ದೊಡ್ಡ ಪಾತ್ರ ವಹಿಸುತ್ತದೆ. ಡ್ರಗ್ಸ್‌ನ ಋಣಾತ್ಮಕ ಪರಿಣಾಮಗಳ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವಲ್ಲಿ ನೀವು ದೊಡ್ಡ ಬ್ರ್ಯಾಂಡ್ ಅಂಬಾಸಿಡರ್" ಎಂದು ಮೋದಿ ಎಂದರು.