ನವದೆಹಲಿ :ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ಕುಸ್ತಿಪಟು ರವಿ ದಹಿಯಾ ಅಕ್ಟೋಬರ್ನಲ್ಲಿ ನಾರ್ವೆಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಿಂದ ಹಿಂದೆ ಸರಿದಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ಗಾಗಿ ಭಾರತದ ಕುಸ್ತಿ ಫೆಡರೇಶನ್ (WFI) ಆಯೋಜಿಸುವ ಟ್ರಯಲ್ಸ್ಗೆ ತಯಾರಾಗಲು ಸಮಯ ಸಾಕಾಗಿಲ್ಲ. ಆದ್ದರಿಂದ ತಾವು ವಿಶ್ವಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತಿಲ್ಲ ಎಂದು ಬುಧವಾರ ರವಿಕುಮಾರ್ ಹೇಳಿದ್ದಾರೆ. ಅಕ್ಟೋಬರ್ 2 ರಿಂದ 10ರವರೆಗೆ ನಾರ್ವೆಯ ಓಸ್ಲೋದಲ್ಲಿ ವಿಶ್ವ ಚಾಂಪಿಯನ್ಶಿಪ್ ನಡೆಯಲಿದೆ. ಇದಕ್ಕಾಗಿ ಡಬ್ಲ್ಯುಎಫ್ಐ ಮುಂದಿನ ವಾರ ಟ್ರಯಲ್ಸ್ ಆಯೋಜಿಸಿತ್ತು.
"ನಾನು ಸಿದ್ಧತೆಯಿಲ್ಲದೆ ಅಕಾಡಕ್ಕಿಳಿಯಲು ಬಯಸುವುದಿಲ್ಲ. ಸಾಕಷ್ಟು ಅಭ್ಯಾಸವಿಲ್ಲದೆ ಸ್ಪರ್ಧಿಸುವುದರಿಂದ ಏನು ಪ್ರಯೋಜನವಿದೆ. ಹಾಗಾಗಿ, ನಾನು ವಿಶ್ವ ಚಾಂಪಿಯನ್ಶಿಪ್ನಿಂದ ಹೊರಗುಳಿಯಬೇಕೆಂದು ನಿರ್ಧರಿಸಿದ್ದೇನೆ. ಯಾಕೆಂದರೆ, ನಾನು ಸಾಕಷ್ಟು ಅಭ್ಯಾಸವಿಲ್ಲದೆ ಟ್ರಯಲ್ಸ್ಗೆ ಹೋಗಲು ಬಯಸುವುದಿಲ್ಲ" ಎಂದು ದಹಿಯಾ ಪಿಟಿಐಗೆ ತಿಳಿಸಿದ್ದಾರೆ.
ದಹಿಯಾ ವಿಶ್ವಚಾಂಪಿಯನ್ಶಿಪ್ನಿಂದ ಹೊರ ಬರುತ್ತಿರುವ ಎರಡನೇ ಸ್ಟಾರ್ ಕುಸ್ತಿಪಟುವಾಗಿದ್ದಾರೆ. ಈಗಾಗಲೇ ಟೋಕಿಯೊದಲ್ಲಿ ಕಂಚಿನ ಪದಕ ಗೆದ್ದಿದ್ದ ಬಜರಂಗ್ ಪೂನಿಯಾ ಕೂಡ ಹಿಂದೆ ಸರಿದಿದ್ದರು. ಆದರೆ, ಅವರು ಮಂಡಿಯಲ್ಲಿ ಗಂಭೀರ ಗಾಯವಾಗಿರುವ ಕಾರಣ 6 ವಾರಗಳ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿರುವುದರಿಂದ ವಿಶ್ವ ಚಾಂಪಿಯನ್ಶಿಪ್ನಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದರು.
ಇದನ್ನು ಓದಿ:ಗಾಯದ ಕಾರಣ ವಿಶ್ವಚಾಂಪಿಯನ್ಶಿಪ್ನಿಂದ ಬಜರಂಗ್ ಪೂನಿಯಾ ದೂರ