ಲಂಡನ್(ಇಂಗ್ಲೆಂಡ್):ವಿಂಬಲ್ಡನ್ ಗ್ರ್ಯಾಂಡ್ಸ್ಲಾಂ ಪುರುಷರ ಫೈನಲ್ ಇಂದು ಸಂಜೆ ನಡೆಯಲಿದ್ದು, ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಮತ್ತು ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಮಧ್ಯೆ ಸೆಣಸಾಟ ನಡೆಯಲಿದೆ. ನೊವಾಕ್ ಜೊಕೊವಿಕ್ ದಾಖಲೆಯ 24ನೇ ಮತ್ತು 8ನೇ ವಿಂಬಲ್ಡನ್ ಪ್ರಶಸ್ತಿ ಜಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಇತ್ತ ವಿಶ್ವ ನಂಬರ್ 1 ಟೆನ್ನಿಸಿಗ ಅಲ್ಕರಾಜ್ ಕೂಡ 2ನೇ ಗ್ರ್ಯಾಂಡ್ಸ್ಲಾಂ ಮತ್ತು ಮೊದಲ ವಿಂಬಲ್ಡನ್ ಗೆಲುವಿಗಾಗಿ ಕಾದಾಡಲಿದ್ದಾರೆ.
36 ವರ್ಷದ ನೊವಾಕ್ ಜೊಕೊವಿಕ್ ವಿಂಬಲ್ಡನ್‌ನಲ್ಲಿ ಸತತ 28 ಪಂದ್ಯಗಳನ್ನು ಗೆದ್ದಿದ್ದಾರೆ. ಫೈನಲ್‌ನಲ್ಲಿ ಗೆದ್ದರೆ ಜೊಕೊವಿಕ್ ಹಲವು ದಾಖಲೆಗಳನ್ನು ಬರೆಯಲಿದ್ದಾರೆ. ಈವರೆಗೂ 7 ಪ್ರಶಸ್ತಿಗಳನ್ನು ಗೆದ್ದಿದ್ದು, ಇದು 8ನೇ ಟ್ರೋಫಿಯಾಗಲಿದೆ. ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಅವರ 8 ಟ್ರೋಫಿ ಜಯಿಸಿದ್ದು, ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಇದಲ್ಲದೇ, ಸತತ ಐದನೇ ಸಲ ಟ್ರೋಫಿ ಜಯ ಇದಾಗಲಿದೆ. ಇದಕ್ಕೂ ಮೊದಲು 1976 ರಿಂದ 1980ರ ವರೆಗೆ ಜೋರ್ನ್ ಬೋರ್ಗ್ ಮತ್ತು 2004 ರಿಂದ 2008ರ ವರೆಗೆ ರೋಜರ್ ಫೆಡರರ್ ಅವರು ಮಾತ್ರ ಸತತ 5 ಬಾರಿ ಪ್ರಶಸ್ತಿ ಗೆದ್ದಿದ್ದರು. ನೊವಾಕ್ ಗೆದ್ದಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.
10 ವರ್ಷಗಳಿಂದ ಸೋತಿಲ್ಲ:ಸರ್ಬಿಯಾ ಆಟಗಾರ ವಿಂಬಲ್ಡನ್ನ ಸೆಂಟರ್ ಕೋರ್ಟ್ನಲ್ಲಿ ಕಳೆದ 10 ವರ್ಷಗಳಿಂದ ಸೋಲೇ ಕಂಡಿಲ್ಲ. ಟೆನ್ನಿಸ್‌ನ ಅತ್ಯಂತ ಪ್ರಸಿದ್ಧವಾದ ಅಂಕಣವಾದ ಇಲ್ಲಿ ಕೊನೆಯ ಬಾರಿಗೆ 2013 ರ ಫೈನಲ್‌ನಲ್ಲಿ ಇಂಗ್ಲೆಂಡ್ ಆ್ಯಂಡಿ ಮರ್ರೆ ವಿರುದ್ಧ ಸೋತಿದ್ದರು. ಅದಾದ ಬಳಿಕ ಈ ಅಂಕಣದಲ್ಲಿ ಸತತವಾಗಿ 39 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ರಾಫೆಲ್ ನಡಾಲ್, ರೋಜರ್ ಫೆಡರರ್ ಸೇರಿದಂತೆ 10 ಆಟಗಾರರನ್ನು ಮಣಿಸಿದ್ದಾರೆ.
ಈ ಋತುವಿನಲ್ಲಿ ಈಗಾಗಲೇ ಆಸ್ಟ್ರೇಲಿಯಾ, ಫ್ರೆಂಚ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದು, ವಿಂಬಲ್ಡನ್ ಗೆದ್ದರೆ ಅಮೆರಿಕ ಓಪನ್ ಗೆಲ್ಲುವ ಗುರಿ ಹೊಂದಬಹುದು. ರಾಡ್ ಲೇವರ್ ಬಳಿಕ (1969 ರಲ್ಲಿ) ಯಾರೊಬ್ಬರೂ ಈವರೆಗೂ ಒಂದೇ ವರ್ಷದಲ್ಲಿ ನಾಲ್ಕು ಪ್ರಶಸ್ತಿ ಜಯಿಸಿದ ನಿದರ್ಶನವಿಲ್ಲ.