ಯೂಜಿನ್ (ಅಮೆರಿಕ):ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಚಾಂಪಿಯನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ವಿಫಲರಾದರು. ಅಮೆರಿಕದ ಯೂಜಿನ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 83.80 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಸಾಮಾನ್ಯ ಪ್ರದರ್ಶನ ನೀಡಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇಲ್ಲಿನ ಹಾರ್ವರ್ಡ್ ಫೀಲ್ಡ್‌ನಲ್ಲಿ ಸ್ಪರ್ಧೆ ನಡೆಯುತ್ತಿದ್ದಾಗ ಗಾಳಿ ಬಲವಾಗಿ ಬೀಸುತ್ತಿತ್ತು. ಇದು 25 ವರ್ಷದ ಚೋಪ್ರಾ ಪ್ರದರ್ಶನಕ್ಕೂ ಅಡ್ಡಿಯಾಯಿತು. ಮೊದಲ ಪ್ರಯತ್ನಗಳಲ್ಲಿ ಅವರು ಫೌಲ್ ಆದರು. ಇವರ ಅತ್ಯುತ್ತಮ ಪ್ರಯತ್ನ ಎರಡನೇ ಎಸೆತದಲ್ಲಿ ದಾಖಲಾಯಿತು. ಚೋಪ್ರಾ 83.80 ಮೀ, 81.37 ಮೀ (ಫೌಲ್), 80.74 ಮತ್ತು 80.90 ಮೀ ದೂರ ಜಾವೆಲಿನ್ ಎಸೆದರು.
ಪ್ರಸಕ್ತ ಸೀಸನ್‌ನಲ್ಲಿ ಇದು ಚೋಪ್ರಾರ ಸಾಮಾನ್ಯ ಪ್ರದರ್ಶನವಾಗಿದೆ. 85 ಮೀಟರ್‌ಗಿಂತ ಕಡಿಮೆ ದೂರ ಭರ್ಜಿ ಎಸೆದಿದ್ದು ಕೂಡಾ ಈ ಕೂಟದಲ್ಲಿ ಮೊದಲು. 2022ರಲ್ಲಿ ಜೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ 88.44 ಮೀ ದೂರ ಎಸೆಯುವ ಮೂಲಕ ಚೋಪ್ರಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಜೆಕ್ ರಿಪಬ್ಲಿಕ್‌ನ ಜೇಕಬ್ ವಡ್ಲೇಜ್ ಚಾಂಪಿಯನ್: ಪ್ರಸ್ತುತ ವರ್ಷ, ಜೆಕ್ ರಿಪಬ್ಲಿಕ್ ದೇಶದ ಜೇಕಬ್ ವಡ್ಲೇಜ್ ಅವರು 84.24 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರೊಂದಿಗೆ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದು ಇವರು ಗಳಿಸಿದ 3ನೇ ಡೈಮಂಡ್ ಲೀಗ್ ಚಾಂಪಿಯನ್ ಪ್ರಶಸ್ತಿಯೂ ಹೌದು. ದೇಶವನ್ನು ಪ್ರತಿನಿಧಿಸುತ್ತಿದ್ದ 6 ಸ್ಪರ್ಧಿಗಳ ತಂಡವನ್ನು ಜೇಕಬ್ ಮುನ್ನಡೆಸಿದರು.