ದೋಹಾ:ಕ್ರೊಯೇಷಿಯಾವನ್ನು ಮಣಿಸಿ ಫೈನಲ್ ತಲುಪಿರುವ ಅರ್ಜೆಂಟೀನಾ ವಿರುದ್ಧ ಫೈನಲ್ನಲ್ಲಿ ಸೆಣಸಾಡಲು ಇಂದಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಮೊರಾಕ್ಕೊ ಕಾದಾಡಲಿವೆ. ಸತತ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಫ್ರಾನ್ಸ್, ಮೊದಲ ಬಾರಿಗೆ ಫೈನಲ್ ಪ್ರವೇಶಿಸಲು ಹಾತೊರೆಯುತ್ತಿರುವ ಮೊರಾಕ್ಕೊ ಮಧ್ಯೆ ಅದೃಷ್ಟ ಯಾರ ಪರವಾಗಿದೆ ಎಂಬುದು ಮಧ್ಯರಾತ್ರಿ ಗೊತ್ತಾಗಲಿದೆ.
2018ರ ವಿಶ್ವಕಪ್ ಜಯಿಸಿರುವ ಫ್ರಾನ್ಸ್ ಮತ್ತೊಂದು ಫಿಫಾ ಪ್ರಶಸ್ತಿ ಜಯಿಸಲು ತಯಾರಿ ನಡೆಸಿದ್ದರೆ, ಮೊದಲ ಬಾರಿಗೆ ಸೆಮಿಫೈನಲ್‌ಗೆ ಬಂದಿರುವ ದಕ್ಷಿಣ ಆಫ್ರಿಕಾದ ಮೊದಲ ರಾಷ್ಟ್ರ ಮೊರಾಕ್ಕೊ ಫೈನಲ್ಗೆ ಲಗ್ಗೆ ಇಟ್ಟು ಇತಿಹಾಸ ನಿರ್ಮಿಸುವ ತುದಿಗಾಲಲ್ಲಿದೆ.
ಫ್ರಾನ್ಸ್ ಇದುವರೆಗೆ ಒಟ್ಟು 3 ಬಾರಿ ಫೈನಲ್ ತಲುಪಿದ್ದು, ಈ ಪೈಕಿ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. 2022ರ ಫಿಫಾ ವಿಶ್ವಕಪ್ ಗೆದ್ದರೆ ಬ್ರೆಜಿಲ್ ದಾಖಲೆ ಸರಿಗಟ್ಟಲಿದೆ. ಬ್ರೆಜಿಲ್ ಈ ಹಿಂದೆ 1958 ಮತ್ತು 1962 ರಲ್ಲಿ ಸತತ ಎರಡು ಬಾರಿ ಫುಟ್ಬಾಲ್ನ ಅತ್ಯುನ್ನತ ಪ್ರಶಸ್ತಿ ಜಯಿಸಿದೆ.
ಫ್ರಾನ್ಸ್ಗೆ ಸೆಮೀಸ್ ಕಂಟಕ:ಫ್ರಾನ್ಸ್ ಇದುವರೆಗೂ ಮೂರು ಬಾರಿ ಸೆಮೀಸ್ನಲ್ಲಿ ಸೋಲು ಕಂಡಿದೆ. 1958, 1982, 1986 ರಲ್ಲಿ ಸೆಮಿಫೈನಲ್ ಬಂದು ಸೋಲು ಕಂಡಿತ್ತು. ಮೂರು ಫೈನಲ್ ಆಡಿದ್ದು ಎರಡು (1998, 2018) ಬಾರಿ ಪ್ರಶಸ್ತಿ ಜಯಿಸಿದೆ. ಯುವತಾರೆ ಕೀಲಿಯಸ್ ಎಂಬಾಪೆ, ಓಲಿವಿಯರ್ ಗಿರೌಡ್ ವಿಶ್ವಕಪ್‌ನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ್ದು, ಗಿರೌಡ್ ಗೋಲ್ಡನ್ ಬೂಟ್‌ಗಾಗಿ ಪ್ರಬಲ ಸ್ಪರ್ಧಿಯಾಗಿದ್ದಾರೆ.