ರಿಯಾದ್ (ಸೌದಿ ಅರೇಬಿಯಾ): ಭಾರತದ ದೇಶೀಯ ಟೂರ್ನಿಗಳಲ್ಲೇ ಪ್ರತಿಷ್ಠಿತವಾದ ಹಿರೋ ಸಂತೋಷ್ ಟ್ರೋಫಿಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವು 47 ವರ್ಷಗಳ ನಂತರದ ಫೈನಲ್ಗೆ ಲಗ್ಗೆ ಇಟ್ಟಿದೆ. ರಿಯಾದ್ನ ಕಿಂಗ್ ಫಹದ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ 3-1 ಗೋಲುಗಳ ಅಂತರದಿಂದ ಕರ್ನಾಟಕ ಜಯಭೇರಿ ಬಾರಿಸಿದೆ.
ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯಿಂದಲೂ ಕರ್ನಾಟಕವು ಫುಟ್ಬಾಲ್ ಆಡುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದಿಂದ ರಾಜ್ಯವು ದಿಗ್ಗಜ ಫುಟ್ಬಾಲ್ ಆಟಗಾರರನ್ನು ನೀಡಿದೆ. ಈ ಪ್ರತಿ ಆಟಗಾರರು ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಆದರೂ, ಕಳೆದ ಐದು ದಶಕಗಳಿಂದ ಸಂತೋಷ್ ಟ್ರೋಫಿಯಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ಮಾಡಿಲ್ಲ. 1975-76ರ ಆವೃತ್ತಿಯಲ್ಲಿ ಕೊನೆಯ ಬಾರಿಗೆ ರಾಜ್ಯದ ಆಟಗಾರರು ಫೈನಲ್ ತಲುಪಿದ್ದರು. ಅಂದಿನಿಂದ ಇದುವರೆಗೆ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಡಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ಮಹಿಳಾ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಹರ್ಮನ್‌ಪ್ರೀತ್ ಕೌರ್ ನಾಯಕಿ
ಆದಾಗ್ಯೂ, ಕಿಂಗ್ ಫಹದ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಸಂರ್ಪೂಣವಾಗಿ ಪರಿಸ್ಥಿತಿ ಬದಲಾಯಿತು. ಎಂಟು ಬಾರಿಯ ಚಾಂಪಿಯನ್ ಪಂಜಾಬ್‌ವನ್ನು ಮೇಘಾಲಯ ಮಣಿಸಿ, ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿತು. ಇದರ ನಂತರದಲ್ಲಿ ಫೈನಲ್ ಸುತ್ತಿಗೆ ಎಂಟ್ರಿ ಕೊಡುವ ಸರದಿ ಕರ್ನಾಟಕದದ್ದಾಗಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ಪ್ರಬಲ ಸ್ಪರ್ಧಿಯಾದ ಸರ್ವಿಸಸ್ ವಿರುದ್ಧ ಕರ್ನಾಟಕ ತಂಡವು ವಿರೋಚಿತ ಗೆಲುವು ಸಾಧಿಸಿತು.