ಹೊಸದಿಲ್ಲಿ: ಇದೇ ವರ್ಷದ ಜುಲೈನಲ್ಲಿ ಆರಂಭವಾಗಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಮುಂದೂಡಲಾಗಿದ್ದು, 2021 ರ ಜುಲೈ 23 ರಿಂದ ಆಗಸ್ಟ್ 8 ರವರೆಗೆ ಕ್ರೀಡಾಕೂಟ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿ (ಐಓಸಿ) ತಿಳಿಸಿದೆ. ಕೊರೊನಾ ವೈರಸ್ನಿಂದ ಜಗತ್ತಿನೆಲ್ಲೆಡೆ ಲಾಕ್ಡೌನ್ ಘೋಷಿಸಿರುವ ಕಾರಣದಿಂದ ಒಲಿಂಪಿಕ್ ಕ್ರೀಡಾಕೂಟಗಳನ್ನು ಬರುವ ವರ್ಷಕ್ಕೆ ಮುಂದೂಡಲಾಗಿದೆ.
ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಅವಧಿ ವಿಸ್ತರಣೆ - ವಯೋಮಿತಿ ಆಧರಿತ ಕ್ರೀಡೆ
ಕೊರೊನಾ ವೈರಸ್ ಭೀತಿಯಿಂದ ವಿಶ್ವವೇ ಲಾಕ್ಡೌನ್ ಆಗಿದ್ದರಿಂದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಸಹ ಮುಂದೂಡಲಾಗಿದೆ. ಇದೇ ವರ್ಷದ ಜುಲೈನಿಂದ ಆರಂಭವಾಗಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಈಗ 2021 ರಲ್ಲಿ ನಡೆಯಲಿದೆ.
2021ರ ಒಲಿಂಪಿಕ್ನಲ್ಲಿ ಭಾಗವಹಿಸಲು ಅರ್ಹತಾ ಅವಧಿಯನ್ನು ಜೂನ್ 21, 2021 ನಿಗದಿಪಡಿಸಲಾಗಿದೆ. ಕ್ರೀಡಾಕೂಟಗಳ ಅರ್ಹತಾ ಮಾನದಂಡಗಳನ್ನು ಏಪ್ರಿಲ್ ಮಧ್ಯದೊಳಗೆ ನಿರ್ಧರಿಸಲಾಗುವುದು ಎಂದು ಐಓಸಿ ಹೇಳಿದೆ.
2020ರ ಒಲಿಂಪಿಕ್ಗೆ ಅರ್ಹತೆ ಪಡೆದಿದ್ದವರನ್ನು ಗಮನದಲ್ಲಿಟ್ಟುಕೊಂಡು, ವಯೋಮಿತಿ ಆಧರಿತ ಕ್ರೀಡೆಗಳಲ್ಲಿ ವಯೋಮಿತಿಯ ನಿರ್ಬಂಧಗಳನ್ನು ಪರಿಷ್ಕರಿಸಲು ಸಿದ್ಧವಿರುವುದಾಗಿ ಐಓಸಿ ತಿಳಿಸಿದ್ದು ಗಮನಾರ್ಹವಾಗಿದೆ. ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ರಾಷ್ಟ್ರಗಳು ಒಲಿಂಪಿಕ್ಸ್ಗೆ ತಮ್ಮ ಕ್ರೀಡಾಪಟುಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದ್ದವು. ಹೀಗಾಗಿ 2020 ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಈಗ 2021 ರಲ್ಲಿ ಜರುಗಲಿದೆ.