ಕರ್ನಾಟಕ

karnataka

ETV Bharat / sports

ತೋಳ್ಬಲವಿಲ್ಲದೇ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ 3 ಪದಕ ಜಯಿಸಿ ಸಾಧನೆಯ ಶಿಖರವೇರಿದ ಶೀತಲ್​ ದೇವಿ ಯಾರು ಗೊತ್ತಾ? - ಬಿಲ್ಲುಗಾರ್ತಿ ಶೀತಲ್​ದೇವಿ

ಪ್ಯಾರಾ ಏಷ್ಯನ್ ​ಗೇಮ್ಸ್​ನಲ್ಲಿ ಮೂರು ಪದಕಗಳನ್ನು ಗೆದ್ದು ದಾಖಲೆ ಬರೆದಿರುವ ಭಾರತೀಯ ಆರ್ಚರಿ ಶೀತಲ್​ ದೇವಿ ಅವರ ಜೀವನ ಪಯಣದ ಬಗ್ಗೆ ಈ ಕೆಳಗಿದೆ ಓದಿ.. ​

ಸಾಧನೆಯ ಶಿಖರ ಏರಿದ ಶೀತಲ್​ದೇವಿ
ಸಾಧನೆಯ ಶಿಖರ ಏರಿದ ಶೀತಲ್​ದೇವಿ

By ETV Bharat Karnataka Team

Published : Oct 31, 2023, 9:29 AM IST

ಹೈದರಾಬಾದ್​:ಸತತಪ್ರಯತ್ನ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಇದ್ದರೆ ಅಂಗವಿಕಲತೆಯನ್ನು ಮೆಟ್ಟಿ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಬಿಲ್ಲುಗಾರ್ತಿ ಶೀತಲ್​ದೇವಿ ಸಾಬೀತು ಪಡಿಸಿದ್ದಾರೆ. ಪ್ಯಾರಾ ಏಷ್ಯನ್​ ಗೇಮ್ಸ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿ ದಾಖಲೆ ನಿರ್ಮಿಸಿದ್ದಾರೆ.

ಹೌದು, 16 ವರ್ಷದ ಶೀತಲ್​ದೇವಿ ಚೀನಾದ ಹ್ಯಾಂಗ್‌ಝೌನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಷ್ಯನ್ ಪ್ಯಾರಾ ಗೇಮ್ಸ್ 2023ರ ಆರ್ಚರಿಯಲ್ಲಿ ಮೂರು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಟೂರ್ನಿಯ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಶೀತಲ್ ಅವರು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಲೋಯ್ ಧಾರ್​ ಎಂಬ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ತಾಯಿ ಇಬ್ಬರು ಹೊಲದಲ್ಲಿ ಕೆಲಸ ಮಾಡುತ್ತಾರೆ. ಹುಟ್ಟಿನಿಂದಲೇ ಶೀತಲ್​ ಫೋಕೊಮೆಲಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಅಂಗಾಂಗಗಳು ವೃದ್ಧಿಯಾಗಲೆ ಇಲ್ಲ. ಇದನ್ನು ಕಂಡ ಪೋಷಕರಿಗೆ ತಮ್ಮ ಮಗಳ ಭವಿಷ್ಯದ ಬಗ್ಗೆ ಚಿಂತೆಯಾಗಿತ್ತು.

ಬಳಿಕ ಬಿಲ್ಲುಗಾರಿಕೆಯತ್ತ ಶೀತಲ್​ ಅವರ ಒಲವು ಸಾಗಿತು. ನಂತರ ಬಿಲ್ಲುಗಾರಿಕೆ ತರಬೇತಿ ಪಡೆಯಲು ಮುಂದಾದರು. ಆರಂಭದಲ್ಲಿ ಶೀತಲ್​ ಬಹಳ ಕಷ್ಟ ಅನುಭವಿಸಿದ್ದರು. ತಮ್ಮ ಬಲಗಾಲಿನಿಂದ ಬಿಲ್ಲು ಎತ್ತಬೇಕಾಗಿದ್ದರಿಂದ ಅದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಹಿಂಜರಿಯದೇ ತಾನು ಅದನ್ನು ಮಾಡಬಲ್ಲೆ ಎಂದು ನಿರಂತರ ಪ್ರಯತ್ನ ಮತ್ತು ದೃಢಸಂಕಲ್ಪದಿಂದ ಬಿಲ್ಲು ಎತ್ತುವುದನ್ನು ಮುಂದುವರೆಸಿದರು. ಅಂತಿಮವಾಗಿ ಅವರಿಗೆ ಬಲಾಗಾಲಿನಿಂದ ಬಿಲ್ಲು ಎತ್ತುವುದು ಸುಲಭವಾಗತೊಡಗಿತು.

ಬಿಲ್ಲುಗಾರ್ತಿಯಾಗಿ ಶೀತಲ್ ಅವರ ಪ್ರಯಾಣವು 2021ರಲ್ಲಿ ಪ್ರಾರಂಭವಾಯಿತು. ಕಿಶ್ತ್ವಾರ್‌ದಲ್ಲಿ ಭಾರತೀಯ ಸೇನೆಯ ಯುವ ಸ್ಪರ್ಧೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅವರು ಭಾಗವಹಿಸಿದರು. ಅದರಲ್ಲಿ ಅದ್ಭುತ ಪ್ರದರ್ಶನ ತೋರಿ ನೆರೆದಿದ್ದವರನ್ನು ಬೆರಗುಗೊಳಿಸಿದರು. ಮುಂದಿನ ಕ್ರೀಡಾ ಭವಿಷ್ಯಕ್ಕಾಗಿ ಅವರಿ ಕೃತಕ ತೋಳುಗಳನ್ನು ಅಳವಡಿಸಲು ಮುಂದಾದ ವೇಳೆ ಅದು ಸಾಧ್ಯವಾಗಲಿಲ್ಲ. ಈ ವೇಳೆ, ಶೀತಲ್ ಅವರ ಆರ್ಚರಿ ಜರ್ನಿ ಪ್ರಾರಂಭಕ್ಕೂ ಮೊದಲೆ ಕೊನೆಗೊಳ್ಳುತ್ತದೆ. ಆಗ ಪೋಷಕರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ಆದರೆ ಇದರಿಂದ ದೃತಿಗೆಡದ ಶೀತಲ್​ ದೇಹವನ್ನೇ ತೋಳುಗಳಂತೆ ತಯಾರಿಸಿಕೊಳ್ಳಲು ಒತ್ತು ನೀಡಿದರು.

ಅಕಾಡೆಮಿಯಲ್ಲಿ ಕಠಿಣ ತರಬೇತಿ:ಬಳಿಕ ಶೀತಲ್ ಶ್ರೀ ಮಾತಾ ವೈಷ್ಣೋ ದೇವಿ ಬೋರ್ಡ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲಾರಂಭಿಸಿದರು. ಶೀತಲ್ ಅಕಾಡೆಮಿಯನ್ನು ತಲುಪಿ ಅಲ್ಲಿ ಇತರ ಪ್ಯಾರಾ ಆರ್ಚರ್‌ಗಳು ಅಭ್ಯಾಸ ಮಾಡುವುದನ್ನು ಕಂಡು ಇವರಿಗೆ ಮತ್ತಷ್ಟು ಉತ್ಸಾಹ ಹೆಚ್ಚಾಗತೊಡಗಿತು. ತರಬೇತುದಾರರಾದ ಅಭಿಲಾಷಾ ಚೌಧರಿ ಮತ್ತು ಕುಲದೀಪ್ ವೆದ್ವಾನ್ ಅವರಿಂದ ತರಬೇತಿ ಆರಂಭಿಸಿದರು. ಅಕಾಡೆಮಿಯಲ್ಲಿ ಶೀತಲ್​ಗಾಗಿ ಪಾದಗಳಿಗೆ ಹೊಂದಿಕ್ಕೊಳ್ಳುವಂತೆ ವಿಶೇಷವಾದ ಬಿಲ್ಲು ಸಿದ್ಧಪಡಿಸಲಾಯಿತು. ಇದರಿಂದ ತನ್ನ ಪಾದಗಳಿಂದ ಸುಲಭವಾಗಿ ಬಿಲ್ಲುವನ್ನು ಎತ್ತಿ ಹಲ್ಲುಗಳನ್ನು ಬಳಸಿ ಬಾಣವನ್ನು ಬಿಡುಲು ಆರಂಭಿಸಿದರು. ತರಬೇತಿ ಪಡೆದ ಕೆಲವೇ ತಿಂಗಳುಗಳಲ್ಲಿ, ಶೀತಲ್ ಒಬ್ಬ ನಿಪುಣ ಬಿಲ್ಲುಗಾರ್ತಿಯಾಗಿ ರೂಪುಗೊಂಡರು. ಮುಂದೆ ಸಾಮಾನ್ಯ ಬಿಲ್ಲುಗಾರರೊಂದಿಗೆ ಶೀತಲ್​ ಸ್ಪರ್ಧೆಯೊಡ್ಡಲಾರಂಭಿಸಿದರು.

ಅಲ್ಲದೆ ಜುಲೈನಲ್ಲಿ ನಡೆದ ಪ್ಯಾರಾ ವರ್ಲ್ಡ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಸಿಂಗಾಪುರದ ಬಿಲ್ಲುಗಾರ ಅಲೀಮ್ ನೂರ್ ಎಸ್ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಏಷ್ಯನ್ ಪ್ಯಾರಾ ಗೇಮ್ಸ್ 2023 ರಲ್ಲಿ, ಅವರು ರಾಕೇಶ್ ಕುಮಾರ್ ಅವರೊಂದಿಗೆ ಮಿಶ್ರ ಸಂಯುಕ್ತ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿದರು . ಬಳಿಕ ಟೀಮ್ ಈವೆಂಟ್‌ನಲ್ಲಿ ಬೆಳ್ಳಿ ಪದಕ, ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಪ್ಯಾರಾ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನದ ಪದಕ ಗೆದ್ದ ಮೊದಲ ಮಹಿಳಾ ಅಥ್ಲೀಟ್ ಎಂಬ ಇತಿಹಾಸ ನಿರ್ಮಿಸಿದರು.

ಅವರ ಆಟಕ್ಕೆ ಮನಸೋತ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಶೀತಲ್‌ಗೆ ಕಾರನ್ನು ಗಿಫ್ಟ್​ ನೀಡಿದ್ದಾರೆ. "ಇನ್ಮುಂದೆ ನನ್ನ ಜೀವನದಲ್ಲಿ ಎಂದಿಗೂ ಸಮಸ್ಯೆಗಳ ಬಗ್ಗೆ ನಾನು ದೂರುವುದಿಲ್ಲ" ದಯವಿಟ್ಟು ನಮ್ಮ ಯಾವುದೇ ಕಾರನ್ನು ನೀವು ಆಯ್ಕೆ ಮಾಡಿಕೊಂಡರು, ಅನುಕೂಲಕ್ಕೆ ತಕ್ಕಂತೆ ನಾವು ಅದನ್ನು ಕಸ್ಟಮೈಸ್ ಮಾಡಿ ಉಡುಗೊರೆಯಾಗಿ ನೀಡುತ್ತೇವೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಶೀತಲ್ ಅವರ ಈ ಯಶೋಗಾಥೆ ನಮಗೆಲ್ಲರಿಗೂ ಸ್ಪೂರ್ತಿದಾಯಕ. ನಾವು ಏನನ್ನಾದರೂ ಸಾಧಿಸಬೇಕು ಎಂದರೆ ಕಠಿಣ ಪರಿಶ್ರಮ, ಸತತ ಪ್ರಯತ್ನ, ಆತ್ಮವಿಶ್ವಾಸ ಹೊಂದಿದ್ದರೆ ಎಂತಹ ದೊಡ್ಡಗುರಿಯನ್ನು ಶೀತಲ್​ ಹಾಗೆ ತಲುಪಬಹುದಾಗಿದೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿ ಜನ್ಮದಿನದಂದು ಈಡನ್​ಗಾರ್ಡನ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ; ವಿಶೇಷ ಸಿದ್ಧತೆ

ABOUT THE AUTHOR

...view details