ಜಕಾರ್ತ (ಇಂಡೋನೇಷ್ಯಾ): ಭಾರತದ ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಓಪನ್ 2023ರ ಅಗ್ರ ಶ್ರೇಯಾಂಕದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ವಿರುದ್ಧ ನೇರ ಗೇಮ್‌ಗಳ ಗೆಲುವು ದಾಖಲಿಸಿ ಸೆಮೀಸ್ಗೆ ಪ್ರವೇಶ ಪಡೆದರು. ಏಳನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಇಂಡೋನೇಷ್ಯಾದ ಅಲ್ಫಿಯಾನ್ ಮತ್ತು ಅಡ್ರಿಯಾಂಟೊ ವಿರುದ್ಧ 21-13, 21-13 ನೇರ ಸೆಟ್ಗಳಲ್ಲಿ ಸೋಲಿಸಿದರು. ಪಂದ್ಯ ಕೇವಲ 41 ನಿಮಿಷಗಳಲ್ಲಿ ಕೊನೆಗೊಂಡಿತು.
ಮಲೇಷ್ಯಾ ಮಾಸ್ಟರ್ಸ್ ಚಾಂಪಿಯನ್ ಹೆಚ್.ಎಸ್. ಪ್ರಣಯ್ ಅವರು ವಿಶ್ವದ 4ನೇ ಶ್ರೇಯಾಂಕದ ಜಪಾನಿನ ಕೊಡೈ ನರೋಕಾ ಅವರ ವಿರುದ್ಧ 21-18, 21-16 ನೇರ ಗೇಮ್‌ಗಳಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು. ಪ್ರಣಯ್ ಇದಕ್ಕೂ ಮುನ್ನ 21-18, 21-16ರಲ್ಲಿ ವಿಶ್ವದ ನಂ.16 ರ್‍ಯಾಂಕಿನ ಆಟಗಾರ ಹಾಂಗ್ ಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದ್ದರು.
ಕ್ವಾರ್ಟರ್ ಫೈನಲ್ನಲ್ಲಿ ಶ್ರೀಕಾಂತ್ಗೆ ಸೋಲು:ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಅವರು ಚೀನಾದ ಲಿ ಶಿ ಫೆಂಗ್ ವಿರುದ್ಧ ಕಠಿಣ ಹೋರಾಟದ ನಂತರ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದರು. ಹೀಗಾಗಿ ಇಂಡೋನೇಷ್ಯಾ ಓಪನ್ 2023ಯ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ಅಂಗಳಕ್ಕೆ ಕಾಲಿಟ್ಟ ಭಾರತದ ಮೊದಲ ಆಟಗಾರ ಶ್ರೀಕಾಂತ್ 14-21 21-14 12-21ರಿಂದ ಒಂದು ಗಂಟೆ ಒಂಭತ್ತು ನಿಮಿಷಗಳಲ್ಲಿ ವಿಶ್ವದ ನಂ.10 ಶ್ರೇಯಾಂಕಿತ ಫೆಂಗ್ ವಿರುದ್ಧ ಹೋರಾಡಿ ಸೋತರು. ಇದು ಶ್ರೀಕಾಂತ್ ಮತ್ತು ಫೆಂಗ್ ನಡುವಿನ ಎರಡನೇ ಮುಖಾಮುಖಿಯಾಗಿದ್ದು, ಹೆಡ್-ಟು-ಹೆಡ್ ದಾಖಲೆಯಲ್ಲಿ1-1ರ ಸಮಬಲವನ್ನು ಫೆಂಗ್ ಸಾಧಿಸಿದರು. ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಕಿಡಂಬಿ ಶ್ರೀಕಾಂತ್ ಭಾರತದ ಆಟಗಾರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಅವರನ್ನು ಮಣಿಸಿದ್ದರು.
ಪ್ರಿಯಾಂಶು ರಾಜಾವತ್ಗೆ ಸೋಲು: ಭಾರತದ ವಿಶ್ವದ ನಂ. 34 ಪ್ರಿಯಾಂಶು ರಾಜಾವತ್ ಅವರು ವಿಶ್ವದ ನಂ. 2 ಮತ್ತು ಟೋಕಿಯೊ 2022 ರ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ 22-20, 15-21, 15-21 ಅಂತರದಿಂದ ಸೋಲನುಭವಿಸಿ ಇಂಡೋನೇಷ್ಯಾ ಓಪನ್ 2023 ರಿಂದ ಹೊರಗುಳಿದರು.
16 ರ ಸುತ್ತಿನಲ್ಲೇ ಹೊರ ನಡೆದ ಸಿಂಧು: ಪಿ.ವಿ. ಸಿಂಧು ಅವರು ಈ ವರ್ಷ ಹೆಚ್ಚು ನಿರಾಶೆಗಳನ್ನೇ ಅನುಭವಿಸಿದ್ದಾರೆ. ಇಂಡೋನೇಷ್ಯಾ ಓಪನ್ 2023ರಲ್ಲಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ ಸೋಲನುಭವಿಸಿದರು. ಒಲಿಂಪಿಕ್ ಪದಕ ವಿಜೇತೆ ಸಿಂಧು 21-18, 21-16 ನೇರ ಗೇಮ್‌ಗಳಲ್ಲಿ ತೈ ತ್ಸು ಯಿಂಗ್ ವಿರುದ್ಧ ಸೋತರು. ಸಿಂಧು 2/16ರ ಸುತ್ತಿನಲ್ಲಿ ಪಂದ್ಯಾವಳಿಯಿಂದ ನಿರ್ಗಮಿಸಿದರು.
ಇದನ್ನೂ ಓದಿ:Roger Binny: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಸೋಲು; ಬಿಸಿಸಿಐ ಬಾಸ್ ರೋಜರ್ ಬಿನ್ನಿ ಕೊಟ್ಟ ಕಾರಣ ಹೀಗಿತ್ತು..