ಲಂಡನ್:ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಇತಿಹಾಸ ಬರೆದಿದ್ದ ಭಾರತದ ಫೆನ್ಸರ್ ಸ್ಪರ್ಧಿ ಭವಾನಿ ದೇವಿ ಇದೀಗ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ವೈಯಕ್ತಿಕ ಸೇಬರ್ ವಿಭಾಗದ ಫೈನಲ್ನಲ್ಲಿ ಆಸ್ಟ್ರೇಲಿಯಾದ ಎರಡನೇ ಶ್ರೇಯಾಂಕಿತ ವರೋನಿಕಾ ವೇಸ್ಲೆವಾ ವಿರುದ್ಧ 15-10ರ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ಕಳೆದ ಬಾರಿ ಗೆದ್ದಿದ್ದ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು.
ವಿಶ್ವದ 42ನೇ ಶ್ರೇಯಾಂಕದಲ್ಲಿರುವ ಫೆನ್ಸರ್ ಭವಾನಿ, ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿರುವ ಕಾರಣ ಇದೀಗ ಮುಂಬರುವ ಒಲಿಂಪಿಕ್ಸ್‌ಗೆ ಅರ್ಹತೆಯನ್ನೂ ಪಡೆದುಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಇಸ್ತಾನ್ಬುಲ್ನಲ್ಲಿ ನಡೆದ ವಿಶ್ವಕಪ್ನಲ್ಲಿ 23ನೇ ಸ್ಥಾನ ಗಳಿಸಿದ್ದ ಭವಾನಿ ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದಾರೆ. ಪಂದ್ಯ ಗೆದ್ದ ಬಳಿಕ ಮಾತನಾಡಿರುವ ಭವಾನಿ, "ಪಂದ್ಯ ಕಠಿಣ ಪಂದ್ಯವಾಗಿತ್ತು, ಗೆಲುವು ಸಾಧಿಸಿ ಭಾರತಕ್ಕೆ ಮತ್ತೊಮ್ಮೆ ಚಿನ್ನದ ಪದಕ ದಕ್ಕಿಸಿಕೊಡುವಲ್ಲಿ ಯಶಸ್ವಿಯಾಗಿರುವುದಕ್ಕೆ ಖುಷಿಯಾಗಿದೆ" ಎಂದರು. ಮುಂಬರುವ ದಿನಗಳಲ್ಲಿ ಮತ್ತಷ್ಟು ಪದಕ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Tokyo Olympics: ಕತ್ತಿವರಸೆ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಭವಾನಿ ದೇವಿಗೆ ಸೋಲು
ಭಾರತದಿಂದ ಫೆನ್ಸಿಂಗ್ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಭವಾನಿ ದೇವಿ ಪಾತ್ರರಾಗಿದ್ದರು. ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಭವಾನಿ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಸಿಕ್ಕಿತ್ತು.