ಬ್ಯಾಂಕಾಕ್:ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ 25ನೇ Asian Athletics Championships 2023 ರ ಎರಡನೇ ದಿನವಾದ ಗುರುವಾರ ಭಾರತೀಯ ಅಥ್ಲೀಟ್‌ಗಳು ಮೂರು ಚಿನ್ನ ಗೆದ್ದಿದ್ದಾರೆ. ಇದಲ್ಲದೇ ಕಂಚಿನ ಪದಕ ಕೂಡ ಲಭಿಸಿದೆ.
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ 13.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ಜಪಾನ್‌ನ ಮೌಶುಮಿ ಓಕಿ 13.12 ಸೆಕೆಂಡ್‌ಗಳಲ್ಲಿ ಎರಡನೇ ಸ್ಥಾನ ಪಡೆದ್ರೆ, ಅವರ ದೇಶವಾಸಿ ಅಶುಕಾ ಟ್ರೆಡಾ 13.14 ಸೆಕೆಂಡುಗಳಲ್ಲಿ ಮೂರನೇ ಸ್ಥಾನ ಪಡೆದು ಮಿಂಚಿದರು. ಯರ್ರಾಜಿ ಅವರ ರಾಷ್ಟ್ರೀಯ ದಾಖಲೆ 12.82 ಸೆಕೆಂಡುಗಳು. ಕಳೆದ ತಿಂಗಳು ನಡೆದ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಅವರು 12.92 ಸೆಕೆಂಡುಗಳಲ್ಲಿ ಚಿನ್ನ ಗೆದ್ದಿದ್ದರು
ಅಜಯ್ ಕುಮಾರ್ ಸರೋಜ್ 1500 ಮೀಟರ್ ಓಟದಲ್ಲಿ ಚಿನ್ನ ಗೆದ್ದರು ಅಜಯ್ ಕುಮಾರ್ ಸರೋಜ್ ಪುರುಷರ 1500 ಮೀಟರ್ ಓಟವನ್ನು 3.41.51 ಸೆಕೆಂಡುಗಳಲ್ಲಿ ಗೆದ್ದು ಭಾರತಕ್ಕೆ ದಿನದ ಎರಡನೇ ಚಿನ್ನವನ್ನು ತಂದುಕೊಟ್ಟರು. ಜಪಾನ್‌ನ ಯುಸುಕಿ ತಕಾಶಿ 3:42.04 ರಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಮತ್ತು ಚೀನಾದ ಲಿ ಡೇಜು 3:42.30 ರಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದರು.
ಅಬ್ದುಲ್ಲಾ ಅಬೂಬಕರ್ ಅವರು ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನವನ್ನು ತಂದುಕೊಟ್ಟರು. ಅವರು 16.92 ಮೀಟರ್ವರೆಗೆ ಜಿಗಿದಿದ್ದಾರೆ. ಜಪಾನ್‌ನ ಹಿಕಾರು ಲೆಖೆತಾ ಅವರು 16.73 ಮೀಟರ್ ಜಿಗಿದು ಎರಡನೇ ಸ್ಥಾನ ಮತ್ತು ದಕ್ಷಿಣ ಕೊರಿಯಾದ ಕಿಮ್ ಜಂಗ್ಜು 16.59 ಮೀಟರ್ ಜಿಗಿದು ಮೂರನೇ ಸ್ಥಾನ ಪಡೆದರು. ಎರಡನೇ ದಿನವೂ ಭಾರತಕ್ಕೆ 2 ಕಂಚು ಲಭಿಸಿತು ಐಶ್ವರ್ಯಾ ಮಿಶ್ರಾ 400 ಮೀಟರ್ ಓಟದಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟರು. ಈ ಸ್ಪರ್ಧೆಯಲ್ಲಿ ಶ್ರೀಲಂಕಾದ ರಾಮನಾಯಕ ನದೀಶಾ ಚಿನ್ನ ಮತ್ತು ಉಜ್ಬೇಕಿಸ್ತಾನದ ಫರೀದಾ ಸೊಲಿವಾ ಬೆಳ್ಳಿ ಪದಕ ಗೆದ್ದರು.
ಇದಲ್ಲದೇ ಡೆಕಾಥ್ಲಾನ್‌ನಲ್ಲಿ ತೇಜಸ್ವಿನ್ ಶಂಕರ್ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಅವರು 7527 ಅಂಕಗಳನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಜಪಾನ್‌ನ ಯುಮಾ ಮರುಯಾಮಾ 7745 ಅಂಕಗಳೊಂದಿಗೆ ಚಿನ್ನದ ಪದಕ ಮತ್ತು ಸುತಿಸಾಕ್ ಸಿಂಗ್‌ಖಾನ್ 7626 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು.
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ದಿನವಾದ ಬುಧವಾರ ಅಭಿಷೇಕ್ ಪಾಲ್ ಅವರು 10,000 ಮೀಟರ್ಸ್ ಓಟದಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದರು. ಅವರು ಈ ಓಟವನ್ನು 29:33.36 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಈ ಸ್ಪರ್ಧೆಯಲ್ಲಿ ಜಪಾನ್‌ನ ರೆನ್ ತಜಾವಾ 29:18.44 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ರೆ, 29:31.63 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಕಜಕಿಸ್ತಾನದ ಶಡ್ರಕ್ ಕಿಮುಟೈ ಅವರು ಬೆಳ್ಳಿ ಪದಕ ಪಡೆದು ತೃಪ್ತಿಪಟ್ಟರು.
ಓದಿ:ವಿಂಬಲ್ಡನ್: ನೆದರ್ಲೆಂಡ್ ಸವಾಲು ಮೆಟ್ಟಿನಿಂತು ಸೆಮಿಫೈನಲ್ ಪ್ರವೇಶಿಸಿದ ಬೋಪಣ್ಣ ಜೋಡಿ