ಹ್ಯಾಂಗ್ ಝೌ (ಚೀನಾ):ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಭಾರತ ಹಾಕಿ ತಂಡ ಉಜ್ಬೇಕಿಸ್ತಾನವನ್ನು 16-0 ಅಂತರದಿಂದ ಸೋಲಿಸಿ ಅದ್ಭುತ ಜಯ ಸಾಧಿಸಿದೆ. ಭಾರತದ ಆಟಗಾರರಾದ ಲಲಿತ್ ಉಪಾಧ್ಯಾಯ, ವರುಣ್ ಕುಮಾರ್ ಮತ್ತು ಮನದೀಪ್ ಸಿಂಗ್ ಕೂಡ ತಮ್ಮ ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದರು. ಪಂದ್ಯದ ಆರಂಭದಿಂದ ಕೊನೆಯವರೆಗೂ ಉಜ್ಬೇಕಿಸ್ತಾನದ ಮೇಲೆ ಭಾರತ ಪ್ರಾಬಲ್ಯ ಸಾಧಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು ಮತ್ತು ಅದು ಹಾಗೇ ನಡೆಯಿತು.
ಭಾರತ ತಂಡವು ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದೆ ಮತ್ತು ಉಜ್ಬೇಕಿಸ್ತಾನ್ 66 ನೇ ಸ್ಥಾನದಲ್ಲಿದೆ. ಪಂದ್ಯದಲ್ಲಿ, ಲಲಿತ್ 7, 24, 37, 53 ನೇ ನಿಮಿಷಗಳಲ್ಲಿ ತಲಾ ನಾಲ್ಕು ಗೋಲುಗಳನ್ನು ಮತ್ತು ವರುಣ್ 12, 36, 50, 52 ನೇ ನಿಮಿಷಗಳಲ್ಲಿ ತಲಾ ನಾಲ್ಕು ಗೋಲುಗಳನ್ನು ಗಳಿಸಿದರೆ, ಮಂದೀಪ್ 18, 27, 28 ನೇ ನಿಮಿಷಗಳಲ್ಲಿ ಮೂರು ಗೋಲುಗಳನ್ನು ಗಳಿಸಿದರು. ಅಭಿಷೇಕ್ (17ನೇ), ಅಮಿತ್ ರೋಹಿದಾಸ್ (38ನೇ), ಸುಖಜೀತ್ (42ನೇ), ಶಂಶೇರ್ ಸಿಂಗ್ (43ನೇ) ಮತ್ತು ಸಂಜಯ್ (57ನೇ) ತಲಾ ಒಂದೊಂದು ಗೋಲು ಗಳಿಸಿದರು. ಅಲ್ಲದೇ ಭಾರತ ಉಜ್ಬೇಕಿಸ್ತಾನಕ್ಕೇ ಒಂದೂ ಅವಕಾಶವನ್ನು ಮಾಡಿಕೊಡದೆ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿತು.
ನಾಯಕನಿಗೆ ವಿಶ್ರಾಂತಿ:ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಏಕೆಂದರೆ ಅವರು ಶನಿವಾರ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರೊಂದಿಗೆ ಜಂಟಿ ಧ್ವಜಧಾರಿಯಾಗಿದ್ದರು. ಹೀಗಾಗಿ ಮೊದಲ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.