ಬರ್ಮಿಂಗ್ಹ್ಯಾಮ್:ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಮಲೇಷ್ಯಾದ ಲಿ ಝಿ ಜಿಯಾ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಲಕ್ಷ್ಯಸೇನ್ ಫೈನಲ್ಗೆ ಲಗ್ಗೆ ಹಾಕಿದ್ದು, ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲು ಸಜ್ಜಾಗಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಲಿ ಝಿ ಜಿಯಾ ವಿರುದ್ಧ ಲಕ್ಷ್ಯ ಸೇನ್ 21-13, 12-21 ಹಾಗೂ 21-19 ಸೆಟ್ಗಳಿಂದ ಜಯ ಸಾಧಿಸಿದ್ದಾರೆ.
ಮೊನ್ನೆ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ 21-16, 21-18ರಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರನನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ನಿನ್ನೆ ಚೀನಾದ ಎದುರಾಳಿ ವಿರುದ್ಧ ಸೆಣಸಾಟ ನಡೆಸಬೇಕಾಗಿತ್ತು. ಆದರೆ, ಲು ಗುವಾಂಗ್ ಜು ವಾಕ್ ಓವರ್ ನೀಡಿದ್ದ ಕಾರಣ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದರು. ಇಂದು ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.
ದಾಖಲೆ ಬರೆದ ಲಕ್ಷ್ಯ ಸೇನ್:ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಪ್ರವೇಶಿಸುವ ಮೂಲಕ ಲಕ್ಷ್ಯಸೇನ್ ಹೊಸ ದಾಖಲೆ ಬರೆದಿದ್ದಾರೆ. ಈ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಹಾಕಿರುವ ಐದನೇ ಭಾರತೀಯ ಶಟ್ಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 20 ವರ್ಷದ ಲಕ್ಷ್ಯ ಸೇನ್, ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್ ನಂತರ ಫೈನಲ್ ತಲುಪಿರುವ ಮೂರನೇ ಪುರುಷ ಆಟಗಾರನಾಗಿದ್ದಾರೆ. ಪ್ರಕಾಶ್ ಪಡುಕೋಣೆ ಮತ್ತು ಗೋಪಿಚಂದ್ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಏಕೈಕ ಭಾರತೀಯರಾಗಿದ್ದರೆ, ಸೈನಾ ನೆಹ್ವಾಲ್ 2015 ರಲ್ಲಿ ಫೈನಲ್ ತಲುಪಿದ್ದರು. 2001ರ ಬಳಿಕ ಫೈನಲ್ ಪ್ರವೇಶ ಪಡೆದುಕೊಂಡಿರುವ ಮೊದಲ ಭಾರತೀಯ ಪುರುಷ ಆಟಗಾರನಾಗಿ ಲಕ್ಷ್ಯಸೇನ್ ಹೊರಹೊಮ್ಮಿದ್ದಾರೆ.