ಹ್ಯಾಂಗ್ಝೌ (ಚೀನಾ):ಇತ್ತೀಚಿನ ವರ್ಷಗಳಲ್ಲಿ ಒಲಿಂಪಿಕ್ಸ್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಏಷ್ಯಾಡ್ನಲ್ಲಿ ನಡೆಯುವ ಬುಹುತೇಕ ಎಲ್ಲಾ ಕ್ರೀಡೆಗಳಲ್ಲೂ ಅಥ್ಲೀಟ್ಗಳು ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಹ್ಯಾಂಗ್ಝೌ ಕ್ರೀಡಾಕೂಟಕ್ಕೆ ದೇಶದಿಂದ 655 ಅಥ್ಲೀಟ್ಗಳು ಭಾಗವಹಿಸಿದ್ದು, 100 ಪದಕ ದಾಖಲೆಯನ್ನು ಈ ಬಾರಿ ಬರೆಯಲಿದೆ. 2018ರಲ್ಲಿ 70 ಪದಕ ಗೆದ್ದಿರುವುದು ಅತ್ಯಧಿಕ ಪದಕ ಸಾಧನೆಯಾಗಿತ್ತು. ಈ ಬಾರಿ ಇದನ್ನೂ ಮೀರಿ ಮೂರಂಕಿಗೆ ತಲುಪಲಿದೆ.
ಏಷ್ಯಾಡ್ನ 13ನೇ ದಿನವಾದ ಇಂದು (ಅಕ್ಟೋಬರ್ 6 ,ಶುಕ್ರವಾರ) ಕುಸ್ತಿಯಲ್ಲಿ ಸೋನಮ್ ಮಲಿಕ್ ಕಂಚಿನ ಪದಕ ಗೆಲ್ಲುವುದರೊಂದಿಗೆ 100ನೇ ಪದಕ ಗೆಲ್ಲುವುದು ಖಚಿತವಾಯಿತು. ಸದ್ಯಕ್ಕೆ ದೇಶಕ್ಕೆ ಮತ್ತೊಂದು ಕಂಚಿನ ಪದಕವನ್ನು ಕುಸ್ತಿಯಲ್ಲಿ ಕಿರಣ್ ಬಿಷ್ಣೋಯ್ ತಂದುಕೊಟ್ಟಿದ್ದಾರೆ. ಮಹಿಳೆಯರ ಫ್ರೀಸ್ಟೈಲ್ 76 ಕೆ.ಜಿಯಲ್ಲಿ ಕಿರಣ್ ಕಂಚಿಗೆ ಮುತ್ತಿಕ್ಕಿದರು. ಈ ಮೂಲಕ ಭಾರತ ಒಟ್ಟಾರೆ 92 ಪದಕವನ್ನು ತನ್ನದಾಗಿಸಿಕೊಂಡಿದೆ. ಇದಲ್ಲದೇ ಬಜರಂಗ್ ಪುನಿಯಾ (ಪುರುಷರ ಫ್ರೀಸ್ಟೈಲ್ 65 ಕೆ.ಜಿ) ಮತ್ತು ಅಮನ್ ಸೆಹ್ರಾವತ್ (ಪುರುಷರ ಫ್ರೀಸ್ಟೈಲ್ 57 ಕೆ.ಜಿ) ಅವರಿಂದ ಕುಸ್ತಿಯಲ್ಲಿ ಇನ್ನೆರಡು ಕಂಚು ನಿರೀಕ್ಷೆ ಇದೆ.
ಇನ್ನುಳಿದಂತೆ 8 ಪದಕ ಗೆದ್ದರೆ ಭಾರತ ಪದಕಗಳ ಶತಕ ದಾಖಲಿಸುತ್ತದೆ. ಲೆಕ್ಕಾಚಾರದಂತೆ, ಏಷ್ಯನ್ ಗೇಮ್ಸ್ ಮುಕ್ತಾಯದ ಒಳಗೆ ಭಾರತ 100 ಪದಕಗಳನ್ನು ದಾಟಲಿದೆ. ಇನ್ನೂ ನಾಲ್ಕು ಚಿನ್ನದ ಪದಕ ಬರುವ ಭರವಸೆ ಇದೆ. ಇದೀಗ ಹಾಕಿ ಫೈನಲ್‌ನಲ್ಲಿ ಭಾರತ-ಜಪಾನ್ ಪೈಪೋಟಿ ನಡೆಯುತ್ತಿದೆ. ಈ ಗೇಮ್‌ನಲ್ಲಿ ಭಾರತ ಪ್ರಬಲ ಚಿನ್ನದ ಆಕಾಂಕ್ಷಿಯಾಗಿದೆ. ಇದಲ್ಲದೇ ಪುರುಷರ ಮತ್ತು ವನಿತೆಯರ ಕಬಡ್ಡಿ, ಪುರುಷರ ಕ್ರಿಕೆಟ್ನಲ್ಲೂ ಚಿನ್ನದ ಭರವಸೆ ಮೂಡಿದೆ.