ನ್ಯೂಯಾರ್ಕ್: ಪ್ರತಿಷ್ಟಿತ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಪೊಲೆಂಡ್‌ನ ಇಗಾ ಸ್ವಯಾಟೆಕ್ ಗೆದ್ದುಕೊಂಡಿದ್ದಾರೆ. ನ್ಯೂಯಾರ್ಕ್‌ನ ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ಟ್ಯುನಿಷಿಯಾದ ಒನ್ಸ್ ಜಬೇರ್ ಅವರನ್ನು 6-2, 7-6(7/5) ನೇರ ಸೆಟ್‌ಗಳಿಂದ ನಿರಾಯಾಸವಾಗಿ ಮಣಿಸಿದರು. ಇದು ಇಗಾ ಸ್ವಯಾಟೆಕ್ ಅವರಿಗೆ ಚೊಚ್ಚಲ ಯುಎಸ್ ಕಿರೀಟ ಹಾಗೂ 3ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.
ಪಂದ್ಯದ ಮೊದಲ ಸೆಟ್‌ನಲ್ಲಿ ಎದುರಾಳಿ ಆಟಗಾರ್ತಿಯ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಪೊಲಿಶ್ ಆಟಗಾರ್ತಿ 6-2ರ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಸೆಟ್ ಗೆದ್ದುಗೊಂಡು ಮತ್ತಷ್ಟು ಉತ್ಸಾಹದಿಂದ ಆಟವಾಡಿದ ಇಗಾ ಸ್ವಯಾಟೆಕ್ ಅವರಿಗೆ ಎರಡನೇ ಸೆಟ್‌ನಲ್ಲಿ ಟ್ಯುನಿಷಿಯಾ ಆಟಗಾರ್ತಿ ಕೊಂಚ ಪೈಪೋಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಅಗ್ರ ಶ್ರೇಯಾಂಕಿತೆಯನ್ನು ಟೈ ಬ್ರೇಕರ್‌ವರೆಗೆ ತೆಗೆದುಕೊಂಡು ಹೋದರು. ಆದರೆ ಈ ಸಂದರ್ಭದಲ್ಲಿಯೂ ಅದ್ಭುತವಾಗಿ ಆಡಿದ ಇಗಾ, ಇಲ್ಲಿಯೂ ವಿಜಯ ತನ್ನದಾಗಿಸಿಕೊಂಡರು. ಈ ಮೂಲಕ ಯುಎಸ್ ಓಪನ್ ಗೆಲ್ಲುವ ಅಪರೂಪದ ಅವಕಾಶವನ್ನು ಆಫ್ರಿಕಾ ಆಟಗಾರ್ತಿ ಒನ್ಸ್ ಜಬೇರ್ ಕಳೆದುಕೊಂಡರು.
ಕಳೆದ ಜೂನ್ ತಿಂಗಳಲ್ಲಿ 21 ವರ್ಷದ ಇಗಾ ಸ್ವಯಾಟೆಕ್ ಅವರು ಫ್ರೆಂಚ್ ಸಿಂಗಲ್ಸ್ ಕಿರೀಟ ತನ್ನದಾಗಿಸಿಕೊಂಡಿದ್ದರು. ಇದೀಗ ಯುಎಸ್ ಓಪನ್ ಕೂಡಾ ಗೆದ್ದುಕೊಂಡಿದ್ದು, ಒಂದೇ ಸೀಸನ್‌ನಲ್ಲಿ 2 ಗ್ರ್ಯಾಂಡ್‌ಸ್ಲಾಮ್ ಮುಡಿಗೇರಿಸಿಕೊಂಡ ಜಗತ್ತಿನ ಮೊದಲ ಮಹಿಳಾ ಟೆನಿಸ್ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ. ಇವರು ಈವರೆಗೆ ಆಡಿರುವ ಹತ್ತು ಫೈನಲ್ ಪಂದ್ಯಗಳಲ್ಲಿ ಒಂದೂ ಸೆಟ್ ಬಿಟ್ಟು ಕೊಟ್ಟಿಲ್ಲ ಎನ್ನುವುದು ಈಕೆಯ ಪ್ರತಿಭೆಗೆ ಸಾಕ್ಷಿ.