ಚೆನ್ನೈ (ತಮಿಳುನಾಡು) : ನಿನ್ನೆ ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಕ್ರಿಕೆಟ್ ಅಭಿಮಾನಿ ಜಾರ್ವೋ 69 ಎಂದೂ ಕರೆಯಲ್ಪಡುವ ಡೇನಿಯಲ್ ಜಾರ್ವಿಸ್ಗೆ ಐಸಿಸಿ ಬಿಗ್ ಶಾಕ್ ನೀಡಿದೆ.
ಹೌದು, ಈ ಬಗ್ಗೆ ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, "ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವುದು ನಮ್ಮ ಆದ್ಯತೆಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಏನಾಯಿತು ಎಂಬುದು ನಿಮಗೆಲ್ಲ ತಿಳಿದಿದೆ, ಮತ್ತೆ ಇಂತಹ ಘಟನೆ ಸಂಭವಿಸದಂತೆ ತಡೆಯಲು ಹಾಗೂ ಹೆಚ್ಚುವರಿ ಭದ್ರತಾ ಕ್ರಮಗಳ ಅಗತ್ಯವಿದೆ. ಆದ್ದರಿಂದ ಮುಂದಿನ ಎಲ್ಲ ಪಂದ್ಯಗಳಿಗೆ ಜಾರ್ವೋ ಹಾಜರಾಗದಂತೆ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ಜಾರ್ವೋ ಕುರಿತಾದ ಮಾಹಿತಿ :ಜನಪ್ರಿಯ ಮತ್ತು ವಿವಾದಾತ್ಮಕ ಕುಚೇಷ್ಟೆಗಾರ ಡೇನಿಯಲ್ ಜಾರ್ವಿಸ್ ಅಲಿಯಾಸ್ ಜಾರ್ವೋ ನಿನ್ನೆ ನಡೆದ ಕ್ರಿಕೆಟ್ ಪಂದ್ಯದ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ಬಂದಿದ್ದ. ಫೀಲ್ಡಿಂಗ್ ಮಾಡುತ್ತಿದ್ದ ಭಾರತೀಯ ಆಟಗಾರರ ಜೊತೆಗೆ ಜಾರ್ವೋ ಸೇರಿಕೊಂಡಿದ್ದ. ಈ ವೇಳೆ, ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ಕಳಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜಾರ್ವೋ ಬಳಿಗೆ ಬಂದು ಮಾತನಾಡಿಸಿ ಹೊರಗೆ ಹೋಗು ಎಂದು ಹೇಳಿದ್ದಾರೆ. ಇಂಗ್ಲೆಂಡ್ನ ಜಾರ್ವೋ bmwjarvo ಹೆಸರಿನ ತನ್ನ YouTube ಚಾನಲ್ ಮೂಲಕ ಹೆಸರುವಾಸಿಯಾಗಿದ್ದಾರೆ. ಅನೇಕ ಪಂದ್ಯಗಳಲ್ಲಿ ಈತ ಈ ರೀತಿಯ ಪ್ರ್ಯಾಂಕ್ ವಿಡಿಯೋಗಳನ್ನು ಮಾಡುತ್ತಾ ಫೇಮಸ್ ಆಗಿದ್ದಾರೆ.