ಕರ್ನಾಟಕ

karnataka

ETV Bharat / sports

'ಅರಿಯದೆ ನಿಷೇಧಿತ ವಸ್ತು ಸೇವಿಸಿದ್ದೆ..': ಜಿಮ್ನಾಸ್ಟ್ ದೀಪಾ ಕರ್ಮಾಕರ್​ ತಪ್ಪೊಪ್ಪಿಗೆ - ಈಟಿವಿ ಭಾರತ ಕನ್ನಡ

ದೇಶದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್​ ಅವರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ತಾನು ತಿಳಿಯದೆ ನಿಷೇಧಿತ ವಸ್ತುವನ್ನು ಸೇವಿಸಿರುವುದಾಗಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Gymnast Dipa Karmakar
ಜಿಮ್ನಾಸ್ಟ್ ದೀಪಾ ಕರ್ಮಾಕರ್

By

Published : Feb 5, 2023, 1:19 PM IST

ನವದೆಹಲಿ: ಡೋಪಿಂಗ್ ಟೆಸ್ಟ್​ನಲ್ಲಿ ಅನುತ್ತೀರ್ಣರಾಗಿ​ 21 ತಿಂಗಳ ಕಾಲ ನಿಷೇಧ ಶಿಕ್ಷೆಗೊಳಗಾಗಿದ್ದ ಜಿಮ್ನಾಸ್ಟ್​ ದೀಪಾ ಕರ್ಮಾಕರ್ ಅವರಿಗೆ ತನ್ನ ತಪ್ಪಿನ ಅರಿವಾಗಿದ್ದು, ಗೊತ್ತಿಲ್ಲದೇ ನಿಷೇಧಿತ ಪದಾರ್ಥಗಳನ್ನು ಸೇವಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್​ನಲ್ಲಿ ವಿಸ್ತಾರವಾಗಿ ಬರೆದುಕೊಂಡಿರುವ ಕರ್ಮಾಕರ್, "ನಾನು ವೃತ್ತಿ ಜೀವನಕ್ಕಾಗಿ ನಡೆಸಿದ ಸುದೀರ್ಘ ಯುದ್ಧದಲ್ಲಿ ಒಂದನ್ನು ಕೊನೆಗೊಳಿಸಿದ್ದೇನೆ. 2021ರಲ್ಲಿ ನನ್ನ ಡೋಪಿಂಗ್​ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ನನ್ನ ಅರಿವಿಗೆ ಬಾರದೇ ನಿಷೇಧಿತ ಪದಾರ್ಥವನ್ನು ಸೇವಿಸಿದ್ದೆ. ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದೆ. ನನ್ನ ದೇಹ ಸೇರಿದ ನಿಷೇಧಿತ ವಸ್ತುವಿನ ಮೂಲ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ" ಎಂದಿದ್ದಾರೆ.

"ಈ ವಿಷಯ ಸೌಹಾರ್ದಯುತವಾಗಿ ಬಗೆಹರಿದಿರುವುದು ನನಗೆ ಸಂತಸ ತಂದಿದೆ. ನನ್ನ ಅಮಾನತು ಅವಧಿಯನ್ನು 3 ತಿಂಗಳು ಕಡಿಮೆ ಮಾಡಲಾಗಿದೆ. ಜುಲೈ 2023ರಲ್ಲಿ ನಾನು ಇಷ್ಟಪಡುವ ಕ್ರೀಡೆಗೆ ಮತ್ತೆ ಮರಳಲು ಅವಕಾಶವಿದೆ. ಆದರೆ ನಿಷೇಧಿತ ಪದಾರ್ಥಗಳು ನನ್ನ ದೇಹವನ್ನು ಹೇಗೆ ಪ್ರವೇಶಿಸಿದವು ಎಂಬುದು ತಿಳಿಯದಿರುವುದು ದುಃಖ ತರಿಸಿದೆ. ನನ್ನ ವೃತ್ತಿಜೀವನದಲ್ಲಿ ಎಂದಿಗೂ ಅಂತಹ ವಸ್ತುಗಳನ್ನು ಸೇವಿಸುವ ಆಲೋಚನೆಯೇ ನನಗೆ ಬಂದಿರಲಿಲ್ಲ. ಜಿಮ್ನಾಸ್ಟಿಕ್​ ನನ್ನ ರಕ್ತದಲ್ಲಿದೆ. ನಾನು ದೇಶಕ್ಕೆ ಅಪಖ್ಯಾತಿ ತರುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ: ಏಷ್ಯಾಕಪ್​ ಪಾಕ್​ನಿಂದ ಔಟ್​, ಮಾರ್ಚ್​ನಲ್ಲಿ ಸ್ಥಳ ನಿಗದಿ

ಹಿನ್ನೆಲೆ..:ಜಿಮ್ನಾಸ್ಟ್​ ದೀಪಾ ಕರ್ಮಾಕರ್‌ ಅವರು ಹೈಜೆನಮೈನ್ ಸೇವಿಸಿರುವ ಬಗ್ಗೆ ಸಾಬೀತಾಗಿದ್ದು, ಇವರನ್ನು ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಐಟಿಎ) ತಪ್ಪಿತಸ್ಥರೆಂದು ಘೋಷಿಸಿದೆ. ನಿಷೇಧಿತ ಪದಾರ್ಥಗಳನ್ನು ಸೇವಿಸಿದ್ದಕ್ಕಾಗಿ ದೀಪಾ ಕರ್ಮಾಕರ್ ಅವರನ್ನು 21 ತಿಂಗಳ ಕಾಲ ನಿಷೇಧಿಸಲಾಗಿದೆ. ಅವರ ಡೋಪಿಂಗ್​ ಮಾದರಿಯನ್ನು 2021ರ ಅಕ್ಟೋಬರ್​ 11 ರಂದು ಸಂಗ್ರಹಿಸಲಾಗಿದೆ. ಅಲ್ಲಿಂದ ಎಣಿಕೆ ಮಾಡಲಾಗಿದ್ದು, 2023ರ ಜುಲೈ 10 ವರೆಗೆ ಅವರನ್ನು ಆಟಗಳಿಂದ ಹೊರಗಿಡಲಾಗಿದೆ. FIG ಆ್ಯಂಟಿ-ಡೋಪಿಂಗ್ ನಿಯಮಗಳ ಆರ್ಟಿಕಲ್ 10.8.2 ರ ಪ್ರಕಾರ ಈ ವಿಷಯವನ್ನು ಸೆಟಲ್ಮೆಂಟ್ ಒಪ್ಪಂದದ ಮೂಲಕ ಪರಿಹರಿಸಲಾಗಿದೆ ಎಂದು ಐಟಿಎ ಹೇಳಿದೆ.

ದೀಪಾ ಕರ್ಮಾಕರ್​ ಪರಿಚಯ: ಜಿಮ್ನಾಸ್ಟಿಕ್​ನಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್​ನಲ್ಲಿ ಭಾರತ ಪ್ರತಿನಿಧಿಸಿದ ದೀಪಾ ಕರ್ಮಾಕರ್​ ತ್ರಿಪುರಾದವರು. 2014ರಲ್ಲಿ ಗ್ಲಾಸ್ಗೋ ಕಾಮನ್​ವೆಲ್ತ್​ ಗೇಮ್ಸ್​ ಮತ್ತು ಏಷ್ಯನ್​ ಜಿಮ್ನಾಸ್ಟಿಕ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಮತ್ತು 2018 ರಲ್ಲಿ ಟರ್ಕಿಯ ಮರ್ಸಿನ್‌ನಲ್ಲಿ ನಡೆದ ಎಫ್‌ಐಜಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನ ವಾಲ್ಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆಯ ಮೂಲಕ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಡೋಪ್ ಪರೀಕ್ಷೆಯಲ್ಲಿ ವಿಫಲ: ಜಿಮ್ನಾಸ್ಟ್‌ ದೀಪಾ ಕರ್ಮಾಕರ್​ಗೆ 21 ತಿಂಗಳ ನಿಷೇಧ ಹೇರಿದ ಐಟಿಎ

ABOUT THE AUTHOR

...view details