ದೋಹಾ(ಕತಾರ್):ಫಿಫಾ ವಿಶ್ವಕಪ್‌ನಲ್ಲಿ ಪ್ರಿಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭಗೊಂಡಿವೆ. ಮೊದಲ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ನೆದರ್ಲೆಂಡ್ಸ್ 3–1 ಗೋಲುಗಳಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ನೆದರ್ಲೆಂಡ್ಸ್ ಏಳನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದು, ಅಮೆರಿಕ ಟೂರ್ನಿಯಿಂದ ಹೊರಬಿದ್ದಿದೆ.
ಆಟ ಆರಂಭವಾಗುತ್ತಿದ್ದಂತೆ 10ನೇ ನಿಮಿಷದಲ್ಲೇ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಡಚ್ಚರ ಮೆಂಫಿಸ್ ಡೆಪಾಯ್ ಗೋಲ್ ಗಳಿಸಿದರು. ಈ ಗೋಲ್ನಿಂದ ಡೆಪಾಯ್ ನೆದರ್ಲೆಂಡ್ಸ್ ಪರ ಎರಡನೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಡೆಪಾಯ್ 85 ಪಂದ್ಯಗಳಲ್ಲಿ 43 ಗೋಲು ಗಳಿಸಿದ್ದಾರೆ. ನೆದರ್ಲೆಂಡ್ಸ್‌ನ ರಾಬಿನ್ ವ್ಯಾನ್ ಪರ್ಸಿ 50 ಗೋಲುಗಳಿಂದ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ 24 ಪಂದ್ಯಗಳಲ್ಲಿ ಡೆಪಾಯ್ 22ನೇ ಗೋಲು ದಾಖಲಿಸಿದ್ದಾರೆ.
ಮೊದಲಾರ್ಧಕ್ಕೂ ಮೊದಲು ಗಾಯದ ಸಮಯ (45+1)ದಲ್ಲಿ ಡಾಲಿ ಬ್ಲೈಂಡ್ ಡಚ್ಚರಿಗೆ ಇನ್ನೊಂದು ಅಂಕ ತಂದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲಿ ಬ್ಲೈಂಡ್ರ ಮೂರನೇ ಗೋಲಾಗಿದೆ. ಮೊದಲಾರ್ಧದ ಅಂತ್ಯಕ್ಕೆ ನೆದರ್ಲೆಂಡ್ಸ್ ಆಟಗಾರರು 2-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.
ಹಾಜಿ ರೈಟ್ 76ನೇ ನಿಮಿಷದಲ್ಲಿ ಅಮೆರಿಕ ಪರ ಮೊದಲ ಗೋಲು ದಾಖಲಿಸಿದರು. ಪಂದ್ಯ ಸಮಬಲದತ್ತ ಸಾಗುತ್ತಿರುವಾಗ ಡಚ್ಚರ ಪರ ಡೆನ್ಜೆಲ್ ಅವರು ಗೋಲು (81ನೇ ನಿಮಿಷ) ಗಳಿಸಿ ನೆದರ್ಲೆಂಡ್ಸ್ಗೆ ಮೂರನೇ ಗೋಲ್ ಉಡುಗೊರೆ ಕೊಟ್ಟರು. ಈ ಮೂಲಕ ನೆದರ್ಲೆಂಡ್ಸ್ ಏಳನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದೆ. ಈ ಹಿಂದೆ 1974ರಲ್ಲಿ (ರನ್ನರ್ಸ್ ಅಪ್), 1978 (ರನ್ನರ್ಸ್ ಅಪ್), 1994 (ಕ್ವಾರ್ಟರ್ ಫೈನಲ್), 1998 (3ನೇ ಸ್ಥಾನ), 2010 (ರನ್ನರ್ಸ್ ಅಪ್) 2014ರಲ್ಲಿ ಮೂರನೇ ಸ್ಥಾನ ಪಡೆದಿತ್ತು.
ಇದನ್ನೂ ಓದಿ:ಮೆಸ್ಸಿ ದಾಖಲೆ! ಆಸ್ಟ್ರೇಲಿಯಾ ಮಣಿಸಿ ಕ್ವಾರ್ಟರ್ಫೈನಲ್ ತಲುಪಿದ ಅರ್ಜೆಂಟೀನಾ