ಆಕ್ಲೆಂಡ್:ನ್ಯೂಜಿಲ್ಯಾಂಡ್ನ ಆಕ್ಲೆಂಡ್ ನಗರದಲ್ಲಿ ಫಿಫಾ ಮಹಿಳಾ ವಿಶ್ವಕಪ್ ಪ್ರಾರಂಭವಾಗುವ ಕೆಲ ಗಂಟೆಗಳ ಮೊದಲು ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ದಾಳಿಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರ ಆರು ಜನ ಗಾಯಗೊಂಡಿದ್ದಾರೆ ಮತ್ತು ಗುಂಡು ಹಾರಿಸಿದ ವ್ಯಕ್ತಿ ಘಟನೆಯ ನಂತರ ಸಾವನ್ನಪ್ಪಿದ್ದಾನೆ.
ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ ಮತ್ತು ಬಂದೂಕುಧಾರಿ ಕಟ್ಟಡದ ಒಳಗೆ ಹೋಗಿ ಗುಂಡಿನ ದಾಳಿಯನ್ನು ಮುಂದುವರೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ ವ್ಯಕ್ತಿ ಲಿಫ್ಟ್ ಶಾಫ್ಟ್‌ಗೆ ಹೋಗಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದರು. ಇದರ ನಂತರ ಆ ವ್ಯಕ್ತಿ ಗುಂಡಿನ ದಾಳಿ ಮುಂದುವರೆಸಿದ್ದು, ಸ್ವಲ್ಪ ಸಮಯದ ನಂತರ ಆತ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಗುಂಡಿನ ದಾಳಿಯ ನಂತರ ಪ್ರಮುಖ ವಹಿವಾಟು ಜಿಲ್ಲೆಯಾಗಿರುವ ಆಕ್ಲೆಂಡ್‌ನಲ್ಲಿ ಭಾರಿ ಸಂಖ್ಯೆಯ ಸಶಸ್ತ್ರ ಯೋಧರನ್ನು ಕಾವಲಿಗೆ ನಿಯೋಜಿಸಲಾಗಿದೆ.
ಗುಂಡಿನ ದಾಳಿಯು ಭಯೋತ್ಪಾದಕ ಕೃತ್ಯದಂತೆ ಕಂಡಿಲ್ಲ ಮತ್ತು ಪಂದ್ಯಾವಳಿಯು ಯೋಜಿಸಿದಂತೆ ಮುಂದುವರಿಯಲಿದೆ ಎಂದು ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಂದು ದಿನದ ನಂತರ ನಗರದ ಈಡನ್ ಪಾರ್ಕ್‌ನಲ್ಲಿ ನ್ಯೂಜಿಲ್ಯಾಂಡ್ ಮತ್ತು ನಾರ್ವೆ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಪೊಲೀಸರು ದಾಳಿಯನ್ನು ತಟಸ್ಥಗೊಳಿಸಿದ್ದಾರೆ ಮತ್ತು ಯಾವುದೇ ಅಪಾಯವಿಲ್ಲ ಎಂದು ಪ್ರಧಾನಿ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ದಾಳಿಯ ಹಿಂದೆ ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಉದ್ದೇಶ ಕಂಡು ಬಂದಿಲ್ಲ. ದುಷ್ಕರ್ಮಿಯು ಪಂಪ್-ಆಕ್ಷನ್ ಶಾಟ್‌ಗನ್ ನೊಂದಿಗೆ ಶಸ್ತ್ರಸಜ್ಜಿತನಾಗಿದ್ದ ಎಂದು ಅವರು ಹೇಳಿದರು.