ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಹೆಸರನ್ನೂ ಸೇರಿಸಲಾಗಿದೆ. ಆರೋಪಿಗಳಿಬ್ಬರನ್ನೂ ಪೊಲೀಸರು ಶೀಘ್ರವೇ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅಪ್ರಾಪ್ತ ಸಂತ್ರಸ್ತೆ ಸೇರಿ ಒಟ್ಟು ಏಳು ಜನ ಮಹಿಳಾ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದಾರೆ. ಆಟವಾಡಲು ಹೋದಲ್ಲೆಲ್ಲಾ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಏಪ್ರಿಲ್ 29ರಂದು ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪೋಕ್ಸೋ ಕಾಯ್ದೆ ಸೇರಿ ಎರಡು ಎಫ್‌ಐಆರ್ ದಾಖಲಿಸಿದ್ದಾರೆ. ಇಲ್ಲಿನ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ಗಳು ದಾಖಲಾಗಿದ್ದು, ಡಬ್ಲ್ಯುಎಫ್‌ಐ ಅಧ್ಯಕ್ಷ ಜೊತೆ ಕೋಚ್ ವಿರುದ್ಧ ಕೂಡ ಎಫ್‌ಐಆರ್ ದಾಖಲಾಗಿದೆ.
ಶೀಘ್ರವೇ ಆರೋಪಿಗಳ ವಿಚಾರಣೆ ಸಾಧ್ಯತೆ:ಮತ್ತೊಂದೆಡೆ, ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ವತಿಯಿಂದ ಸಂತ್ರಸ್ತ ಅಪ್ರಾಪ್ತ ಬಾಲಕಿಯ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಇದೀಗ ಎಫ್‌ಐಆರ್ ಪ್ರಕಾರ ಪೊಲೀಸರು, ಬ್ರಿಜ್ ಭೂಷಣ್ ಸಿಂಗ್ ಮತ್ತು ಆರೋಪಿ ತರಬೇತುದಾರರನ್ನು ಶೀಘ್ರದಲ್ಲೇ ವಿಚಾರಣೆ ನಡೆಸಬಹುದು ಎಂದು ತಿಳಿದು ಬಂದಿದೆ.
ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಧರಣಿ: ಡಬ್ಲ್ಯುಎಫ್‌ಐ ಮುಖ್ಯಸ್ಥರಾದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿದರೆ ನಮ್ಮ ವೃತ್ತಿ ಜೀವನ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆಯನ್ನು ನಡೆಸಿದ್ದರು. ಆಗ ಕೇಂದ್ರ ಸರ್ಕಾರವು ಡಬ್ಲ್ಯುಎಫ್‌ಐ ಮತ್ತು ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಮೇಲುಸ್ತುವಾರಿ ಸಮಿತಿಯನ್ನು ರಚಿಸಿತ್ತು.