ನವದೆಹಲಿ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರ ವಿರುದ್ಧ ದಾಖಲಿಸಲಾಗಿದ್ದ ಮೊಕದ್ದಮೆಗಳನ್ನು ದೆಹಲಿ ಪೊಲೀಸರು ಹಿಂಪಡೆಯಲಿದ್ದಾರೆ. ಇದನ್ನು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಶೀಘ್ರದಲ್ಲೇ ಪೊಲೀಸರು ನ್ಯಾಯಾಲಯಕ್ಕೆ ರದ್ದು ವರದಿ ಸಲ್ಲಿಸಲಿದ್ದಾರೆ, ಇದಕ್ಕಾಗಿ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕುಸ್ತಿಪಟುಗಳ ಬೇಡಿಕೆಯಂತೆ ದೆಹಲಿ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ. ಪ್ರತಿಭಟನಾ ನಿರತ ಕುಸ್ತಿಪಟುಗಳು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾದ ನಂತರ, ಮೂರು ಷರತ್ತುಗಳನ್ನು ತಿಳಿಸಿ ತಮ್ಮ ಹೋರಾಟವನ್ನು ಜೂನ್ 15 ರ ತನಕ ಸ್ಥಗಿತಗೊಳಿಸಿದ್ದರು. ಕುಸ್ತಿಪಟುಗಳ ಮೊದಲ ಷರತ್ತನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜೂನ್ 15 ರೊಳಗೆ ತನಿಖಾ ವರದಿ ಅಥವಾ ಚಾರ್ಜ್ ಶೀಟ್ ಸಲ್ಲಿಸುವುದಾಗಿತ್ತು. ಷರತ್ತಿನಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
2ನೇ ಷರತ್ತು: ಬ್ರಿಜ್ ಭೂಷಣ್ ಶರಣ್ ಸಿಂಗ್ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಈ ಷರತ್ತನ್ನು ಸಹ ಪೊಲೀಸರು ಒಪ್ಪಿಕೊಂಡಿದ್ದಾರೆ.
ಮೂರನೇ ಷರತ್ತು:ಕುಸ್ತಿಪಟುಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿತ್ತು. ಮೇ 28 ರಂದು ಸಂಸತ್ ಭವನದ ಮುಂದೆ ಪ್ರತಿಭಟನೆ ಮಾಡುವುದಕ್ಕೆ ದೆಹಲಿ ಪೊಲೀಸರು ಕುಸ್ತಿಪಟುಗಳಿಗೆ ಪರವಾನಗಿ ನಿರಾಕರಿಸಿದ್ದರು.