ಕರ್ನಾಟಕ

karnataka

ETV Bharat / sports

ಸ್ಟೀಪಲ್‌ಚೇಸ್​​ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಸಿಯಾಚಿನ್ ಹೀರೋ ಅವಿನಾಶ್​.. ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ರೈತನ ಮಗನ ಸಾಧನೆ

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತಿಯ ಸೇನೆಯ ಅವಿನಾಶ್ ಸೇಬಲ್​ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದ್ದಾರೆ.

Avinash Sable won silver medal
Avinash Sable won silver medal

By

Published : Aug 6, 2022, 8:35 PM IST

Updated : Aug 6, 2022, 8:51 PM IST

ಬರ್ಮಿಂಗ್​ಹ್ಯಾಮ್​​(ಇಂಗ್ಲೆಂಡ್​):ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಭಾರತೀಯ ಪ್ರತಿಭೆಗಳು ಹೊಸ ಹೊಸ ದಾಖಲೆ ನಿರ್ಮಿಸುತ್ತಿದ್ದು, ಒಂದರ ಹಿಂದೆ ಮತ್ತೊಂದು ಪದಕ ಗೆಲ್ಲುತ್ತಿದ್ದಾರೆ. ಇದೀಗ ಭಾರತೀಯ ಯೋಧ ಅವಿನಾಶ್ ಸೇಬಲ್​​ 3000 ಮೀಟರ್ ಸ್ಟೀಪಲ್​ ಚೇಸ್​​ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಹೊಸದೊಂದು ಇತಿಹಾಸ ನಿರ್ಮಿಸಿದ್ದಾರೆ.

ಸ್ಟೀಪಲ್​ ಚೇಸ್​ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಅವಿನಾಶ್​

27 ವರ್ಷದ ಆರ್ಮಿ ಮ್ಯಾನ್​​ ಅವಿನಾಶ್ ಸೇಬಲ್​​ ಸ್ಟೀಪಲ್​ ಚೇಸ್​ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ದಕ್ಕಿಸಿಕೊಟ್ಟಿದ್ದಾರೆ. ಮೂಲತಃ ಮಹಾರಾಷ್ಟ್ರದ ಬೀಡ್​ನವರಾಗಿರುವ ಅವಿನಾಶ್ 18 ವರ್ಷದವರಾಗಿದ್ದಾಗ ಭಾರತೀಯ ಸೇನೆ ಸೇರಿಕೊಳ್ಳುತ್ತಾರೆ. ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್​​ನಲ್ಲಿ ಸೇವೆ ಸಲ್ಲಿಸಿರುವ ಇವರು, ಸ್ಟೀಪಲ್​ ಚೇಸ್​​ನಲ್ಲಿ ಪದಕ ಗೆದ್ದು, ಮಹತ್ವದ ಸಾಧನೆ ಮಾಡಿದ್ದಾರೆ.

ಸ್ಟೀಪಲ್‌ಚೇಸ್​​ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಸಿಯಾಚಿನ್ ಹೀರೋ

ಇಂದು ನಡೆದ ಪಂದ್ಯದಲ್ಲಿ 8:11:20 ಸೆಕೆಂಡ್​​​ಗಳಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದು, ಕೀನ್ಯಾದ ಅಬ್ರಹಾಂ ಕಿಬಿವೋಟ್​ 8:11:15 ಸೆಕೆಂಡ್​​​ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಈ ಹಿಂದೆ ಅಥ್ಲೆಟಿಕ್ಸ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ 8:31:75 ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿ, 11ನೆ ಸ್ಥಾನ ಪಡೆದಿದ್ದ ಇವರು, ಸದ್ಯ ಬೆಳ್ಳಿ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ರೈತನ ಮಗನ ಸಾಧನೆ

ಬಡ ಕುಟುಂಬದಿಂದ ಬಂದ ಅವಿನಾಶ್​: ಮಹಾರಾಷ್ಟ್ರದ ಸಾಧಾರಣ ಕುಟುಂಬದಲ್ಲಿ ಜನಿಸಿರುವ ಅವಿನಾಶ್ ಓರ್ವ ರೈತನ ಮಗ. ಶಾಲೆಗೆ ಹೋಗಲು ಪ್ರತಿದಿನ 6 ಕಿಮೀ ನಡೆದು ಹೋಗಬೇಕಾಗಿತ್ತು. ಅವಿನಾಶ್ ಪ್ರತಿಭೆ ಗುರುತಿಸಿದ್ದ ಶಾಲಾ ಶಿಕ್ಷಕರು ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುತ್ತಿದ್ದರು. ಕಾಲೇಜು​ ದಿನಗಳಲ್ಲಿ ಕ್ರೀಡೆಗಳಲ್ಲಿ ಭಾಗಿಯಾಗುತ್ತಿದ್ದ ಇವರು, ಅನೇಕ ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡಿದ್ದರು. 12ನೇ ತರಗತಿ ವ್ಯಾಸಂಗ ಮುಗಿಯುತ್ತಿದ್ದಂತೆ 18ನೇ ವಯಸ್ಸಿನಲ್ಲಿ ಭಾರತೀಯ ಸೇನೆ ಸೇರಿ, ಸಿಯಾಚಿನ್​​ನಲ್ಲಿ ಕೆಲಸ ಆರಂಭಿಸುತ್ತಾರೆ. ಈ ವೇಳೆ ಸೇನೆಯಲ್ಲಿ ಆಯೋಜನೆಗೊಳ್ಳುತ್ತಿದ್ದ ಚಾಂಪಿಯನ್​ಶಿಪ್​​ಗಳಲ್ಲಿ ಭಾಗಿಯಾಗಿ, ಸ್ಟೀಪಲ್​​ ಚೇಸ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಶುರು ಮಾಡುತ್ತಾರೆ.

ಇದನ್ನೂ ಓದಿರಿ:CWG 2022: 10,000 ಕಿ.ಮೀ ನಡಿಗೆಯಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಪ್ರಿಯಾಂಕಾ ಗೋಸ್ವಾಮಿ

2019ರಲ್ಲಿ ಆಯೋಜನೆಗೊಂಡಿದ್ದ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಅದೇ ವರ್ಷ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆಲ್ಲುತ್ತಾರೆ. ಇದೀಗ, ಕಾಮನ್​ವೆಲ್ತ್​ನಲ್ಲಿ ಬೆಳ್ಳಿಗೆ ಮುತ್ತಿಕ್ಕಿ, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ ಸಲ್ಲಿಸಿದ್ದಾರೆ.

Last Updated : Aug 6, 2022, 8:51 PM IST

ABOUT THE AUTHOR

...view details