ನವದೆಹಲಿ: ಹರಿಯಾಣ ಮೂಲದ ಭಾರತೀಯ ಕ್ರೀಡಾಳು, ಶೂಟರ್ ಮನು ಭಾಕರ್ ಕೋವಿಡ್-19 ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಹರಿಯಾಣ ಕೊರೊನಾ ರಿಲೀಫ್ ಫಂಡ್ ಖಾತೆಗೆ ಅವರು ಹಣ ವರ್ಗಾಯಿಸಿದ್ದಾರೆ.
ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ರೂ. ನೀಡಿದ ಶೂಟರ್ ಮನು ಭಾಕರ್ - ಹರಿಯಾಣ ಕೊರೊನಾ ರಿಲೀಫ್ ಫಂಡ್
ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ದೇಶದ ಹಲವಾರು ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳು, ಜನಸಾಮಾನ್ಯರು ಮುಖ್ಯಮಂತ್ರಿಗಳ ಹಾಗೂ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ತಮ್ಮಿಂದಾದ ಸಹಾಯ ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿಗೆ. ಈಗ ಶೂಟರ್ ಮನು ಭಾಕರ್ ಹರಿಯಾಣ ಕೊರೊನಾ ಪರಿಹಾರ ನಿಧಿಗೆ 1 ಲಕ್ಷ ರೂ. ಮೊತ್ತವನ್ನು ದೇಣಿಗೆ ನೀಡಿದ್ದಾರೆ.

'ಈ ಸಂಕಷ್ಟದ ಸಮಯದಲ್ಲಿ ದೇಶವಾಸಿಗಳ ಪ್ರಾಣ ಕಾಪಾಡುವುದಕ್ಕಿಂತ ಬೇರಾವುದೂ ಮುಖ್ಯವಲ್ಲ. ಇದಕ್ಕಾಗಿ ನಾವೆಲ್ಲರೂ ನಮ್ಮಿಂದ ಕೈಲಾದುದನ್ನು ಮಾಡೋಣ. ಹರಿಯಾಣ ಕೊರೊನಾ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ್ದೇನೆ. ಇತರರೂ ತಮ್ಮಿಂದ ಸಾಧ್ಯವಾದಷ್ಟು ಸಹಾಯದ ಹಸ್ತ ಚಾಚಲಿ.' ಎಂದು ಭಾಕರ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪಿಎಂ ಕೇರ್ ರಿಲೀಫ್ ಫಂಡ್ ಹಾಗೂ ಆಯಾ ರಾಜ್ಯಗಳ ಪರಿಹಾರ ನಿಧಿಗೆ ದೇಶದ ಹಲವಾರು ಕ್ರೀಡಾಪಟುಗಳು ಈಗಾಗಲೇ ಸಾಕಷ್ಟು ಮೊತ್ತದ ದೇಣಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕ್ರಿಕೆಟರ್ ಸುರೇಶ್ ರೈನಾ ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಲಕ್ಷ ರೂ. ಹಾಗೂ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 31 ಲಕ್ಷ ರೂ., ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಾಗೂ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ತಲಾ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ.