ಬರ್ಮಿಂಗ್‌ಹ್ಯಾಮ್(ಇಂಗ್ಲೆಂಡ್): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ. ಇದುವರೆಗೆ 16 ಚಿನ್ನದ ಪದಕಗಳ ಸಮೇತವಾಗಿ ಭಾರತಕ್ಕೆ 47 ಪದಕಗಳನ್ನು ಗೆದ್ದಿದ್ದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಒಟ್ಟಾರೆ ಪದಕದ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.
ಜುಲೈ 28ರಿಂದ ಆರಂಭವಾಗಿರುವ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕುಸ್ತಿ, ವೇಟ್ ಲಿಫ್ಟಿಂಗ್, ಬಾಕ್ಸಿಂಗ್, ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್ ಸೇರಿ ವಿವಿಧ ಕ್ರೀಡೆಗಳಲ್ಲಿ ಭಾರತೀಯರು ಮಿಂಚು ಹರಿಸಿದ್ದಾರೆ. ಇಲ್ಲಿಯವರೆಗೆ 16 ಚಿನ್ನ, 12 ಬೆಳ್ಳಿ ಹಾಗೂ 19 ಕಂಚಿನ ಪದಕಗಳಿಗೆ ಭಾರತೀಯ ಸ್ಪರ್ಧಿಗಳು ಕೊರಳೊಡ್ಡಿದ್ದಾರೆ. ನಾಳೆ (ಆಗಸ್ಟ್ 8) ಕ್ರೀಡಾಕೂಟದ ಕೊನೆಯ ದಿನವಾಗಿದ್ದು, ಭಾರತಕ್ಕೆ ಮತ್ತಷ್ಟು ಪದಕಗಳು ಬರುವ ನಿರೀಕ್ಷೆಯೂ ಇದೆ.
ಕುಸ್ತಿಯಲ್ಲಿ ಅತಿ ಹೆಚ್ಚು ಪದಕ: ಕುಸ್ತಿಯಲ್ಲಿ ಭಾರತದ ಕುಸ್ತಿಪಟುಗಳು ಪರಾಕ್ರಮ ಮೆರೆದಿದ್ದಾರೆ. ಇದುವರೆಗೆ ಭಾರತಕ್ಕೆ ಬಂದ ಒಟ್ಟು 43 ಪದಕಗಳ ಪೈಕಿ ಕುಸ್ತಿಯಲ್ಲೇ 6 ಬಂಗಾರ, 1 ಬೆಳ್ಳಿ ಹಾಗೂ 5 ಕಂಚಿನ ಪದಕಗಳ ಸಮೇತ ಒಟ್ಟು 12 ಮೆಡಲ್ಗಳನ್ನು ಕುಸ್ತಿಪಟುಗಳು ಗೆದ್ದಿದ್ದಾರೆ.
ವೇಟ್ ಲಿಫ್ಟಿಂಗ್ನಲ್ಲಿ 10 ಪದಕ: ಕಾಮನ್‌ವೆಲ್ತ್ ಗೇಮ್ಸ್ನ ವೇಟ್ ಲಿಫ್ಟಿಂಗ್ನಲ್ಲೂ ಭಾರತೀಯ ಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, 10 ಪದಕಗಳನ್ನು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ತಂದುಕೊಟ್ಟಿದ್ದಾರೆ. ಇದರಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಸೇರಿವೆ.
ಅಥ್ಲೆಟಿಕ್ಸ್ನಲ್ಲಿ 8 ಮೆಡಲ್: ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್ನಲ್ಲೂ ಭಾರತದ ಕ್ರೀಡಾಪಟುಗಳು ಮಿಂಚಿದ್ದು, ಇಲ್ಲಿಯವರೆಗೆ 8 ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. 1 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಅಥ್ಲೆಟ್ಗಳು ಜಯಿಸಿದ್ದಾರೆ.