ಬೆಂಗಳೂರು:ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯು ಅಂತಿಮ ಹಂತದತ್ತ ತಲುಪಿದೆ. ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವು ಯು.ಪಿ.ಯೋಧಾ ವಿರುದ್ಧ ಹಾಗೂ ಮತ್ತೊಂದು ಸೆಮೀಸ್‌ನಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಕಾದಾಡಲಿವೆ.
ಸೋಮವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟಿರುವ ಪವನ್ ಕುಮಾರ್ ಶೆರಾವತ್ ಸಾರಥ್ಯದ ಬುಲ್ಸ್, ಮೂರನೇ ಸಲ ಅಂತಿಮ ಹಂತಕ್ಕೆ ತಲುಪುವ ಗುರಿ ಹೊಂದಿದೆ. 2015ರ 2ನೇ ಸೀಸನ್ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಬುಲ್ಸ್ ಯು ಮುಂಬಾ ವಿರುದ್ಧ ಸೋಲುಂಡಿತ್ತು. ಬಳಿಕ 2018ರ 6ನೇ ಆವೃತ್ತಿಯಲ್ಲಿ ಗುಜರಾತ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು.
ಸದ್ಯ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಬುಲ್ಸ್ ತಂಡಕ್ಕೆ ದಬಾಂಗ್ ಡೆಲ್ಲಿ ಎದುರಾಳಿಯಾಗಿದೆ. ಇದಕ್ಕೂ ಮುನ್ನ ರೌಂಡ್ ರಾಬಿನ್ ಹಂತದ ಎರಡು ಕಾದಾಟದಲ್ಲಿ ಬುಲ್ಸ್ ಮೊದಲ ಪಂದ್ಯದಲ್ಲಿ ವಿರುದ್ಧ 61-22ರಿಂದ ಭರ್ಜರಿ ಗೆಲುವು ಸಾಧಿಸಿದ್ದರೆ, ಎರಡನೇ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು.
ಇದನ್ನೂ ಓದಿ:U19 ವಿಶ್ವಕಪ್ ವೇಳೆ ಭಾರತದ ಯುವಕರು ಎದುರಿಸಿದ ಕಷ್ಟಗಳನ್ನು ಬಿಚ್ಚಿಟ್ಟ ಟೀಮ್ ಮ್ಯಾನೇಜರ್
ಈ ಆವೃತ್ತಿಯ 23 ಪಂದ್ಯಗಳಲ್ಲಿ 286 ರೈಡ್ ಅಂಕ ಸಂಪಾದಿಸಿರುವ ನಾಯಕ ಪವನ್, ಬುಲ್ಸ್ ತಂಡದ ಆಧಾರಸ್ತಂಭವಾಗಿದ್ದಾರೆ. ಇನ್ನುಳಿದಂತೆ ಭರತ್ ಹಾಗೂ ಚಂದ್ರನ್ ರಂಜಿತ್ ಪವನ್ಗೆ ಸಾಥ್ ನೀಡಿದ್ದಾರೆ.
ರೌಂಡ್ ರಾಬಿನ್ ಹಂತದಲ್ಲಿ 2ನೇ ಸ್ಥಾನಕ್ಕೇರಿದ್ದ ಡೆಲ್ಲಿ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಸ್ಟಾರ್ ರೈಡರ್ ನವೀನ್ ಕುಮಾರ್ ಅವರನ್ನು ಕಟ್ಟಿಹಾಕುವ ಸವಾಲು ಬುಲ್ಸ್ ಎದುರಿಗಿದೆ.